ಹುಬ್ಬಳ್ಳಿ: ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ದಿಗಂಬರ ಜೈನ್ ಮಹಿಳಾ ಸಮಾಜ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಅಹಿಂಸಾ ನಡಿಗೆ ಜರುಗಿತು.
ಅದಕ್ಕೂ ಮುನ್ನ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಾಮಾಣೀಕರಣ ಸಂಸ್ಥೆಯ ರಾಜ್ಯಾಧ್ಯಕ್ಷೆ ಲಾವಣ್ಯ ಬಳ್ಳಾಲ್ ಅಹಿಂಸಾ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ಅಹಿಂಸಾ ಧರ್ಮ ಪಾಲನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಪ್ರಾಣಿ, ಪಕ್ಷಿಗಳಿಗೆ ನೀರು ಇಟ್ಟು ಪ್ರಾಣಿ ದಯೆ ಪಾಲಿಸಬೇಕು. ಎಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್ ವಿ.ಎಸ್.ವಿ. ಪ್ರಸಾದ ಮಾತನಾಡಿ, ದೇಶದಲ್ಲಿ ಬಹಳಷ್ಟು ಜಾತಿ, ಮತಗಳು ಇದ್ದರೂ ಪ್ರತಿಯೊಬ್ಬರೂ ಅಹಿಂಸೆಗೆ ತಲೆ ಬಾಗಲೇಬೇಕು. ಬಹುತೇಕ ಎಲ್ಲ ಧರ್ಮಗಳು ಅಹಿಂಸೆಯನ್ನೇ ಸಾರುತ್ತವೆ. ಹುಬ್ಬಳ್ಳಿಯ ದಿಗಂಬರ ಜೈನ ಮಹಿಳಾ ಸಮಾಜದಿಂದ ಜನತೆಗೆ ಅಹಿಂಸೆ ಸಂದೇಶ ಸಾರಲು ಹಮ್ಮಿಕೊಂಡಿರುವ ಅಹಿಂಸಾ ನಡಿಗೆ ಮಾದರಿಯಾಗಿದೆ ಎಂದರು.ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ, ಭಗವಾನ್ ಮಹಾವೀರರ ಸಂದೇಶ ಸರ್ವ ಧರ್ಮಕ್ಕೆ ಅವಶ್ಯವಾಗಿದೆ. ಪ್ರೀತಿ, ಅಹಿಂಸೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ಮಹಾವೀರರು ಸಾರಿದ್ದಾರೆ. ದಿಗಂಬರ ಜೈನ ಮಹಿಳಾ ಸಮಾಜ ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.