ಕನ್ನಡಪ್ರಭ ವಾರ್ತೆ ಪಾವಗಡ
ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರಗಳ ಮೂಲಕ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು. ರಾಜ್ಯ ಸೇರಿದಂತೆ ದೇಶದಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ನೆಲಮಂಗಲ ತಾಲೂಕಿನ ವನಕಲ್ಲು ಮಠದ ಪೀಠಾಧ್ಯಕ್ಷ ಶ್ರೀ ಬಸವ ರಮಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ನಡೆದ ತಾಲೂಕು ನೂತನ ಕಾಡುಗೊಲ್ಲ ಯುವಸೇನೆ ಸಂಘದ ಉದ್ಘಾಟನೆ, ಗೊಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಆಧುನಿಕ ಕಾಲ ಘಟ್ಟದಲ್ಲಿಯೂ ಸಮುದಾಯದ ಜನರು ಹಳೆಯ ಪದ್ಧತಿ, ಆಚರಣೆಗೆ ಜೋತು ಬಿದ್ದಿದ್ದು ಹೆಣ್ಣು ಮಕ್ಕಳನ್ನು ಶಾಲಾ, ಕಾಲೇಜಿಗೆ ಕಳುಹಿಸದೆ ಮನೆಕೆಲಸಕ್ಕೆ ಸೀಮಿತ-ಗೊಳಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಮೌಢ್ಯತೆ ಹಾಗೂ ಕಂದಚಾರಗಳನ್ನು ಬದಿಗೊತ್ತಿ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿಯತ್ತ ಸಾಗಿದಾಗ ಮಾತ್ರ ಗೊಲ್ಲ ಸಮಾಜ ಪ್ರಗತಿ ಕಾಣಲು ಸಾಧ್ಯ. ಈ ಬಗ್ಗೆ ಸಮುದಾಯದ ವಿದ್ಯಾವಂತ ಯುವಕರು ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಂಘಟಿತರಾಗಿ ರಾಜಕೀಯ ಸ್ಥಾನಮಾನ ಗಳಿಸುವ ಮೂಲಕ ಗೊಲ್ಲ ಸಮಾಜವನ್ನು ಪ್ರಗತಿದತ್ತ ಕೊಂಡ್ಯೊಯುವಂತೆ ಕರೆ ನೀಡಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಗೊಲ್ಲ ಸಮಾಜ ಒಂದು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಮುನ್ನಡೆಯುತ್ತಿದ್ದು, ತನ್ನ ಕಸುಬುಗಳ ಮೂಲಕ ಸ್ವಾವಲಂಬನೆ ಬದುಕುಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಾದರಿ ಸಮಾಜವಾಗಿದೆ. ಸಮಾಜದ ಬಗ್ಗೆ ಅತ್ಯಂತ ಗೌರವ ಹೊಂದಲಾಗಿದೆ. ತಾವು ಶಾಸಕರಾಗಿದ್ದ ವೇಳೆ ಸಮುದಾಯದ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿತ್ತು. ಗೊಲ್ಲ ಸಮಾಜದ ಪ್ರಗತಿಗೆ ಸದಾ ಬದ್ದರಾಗಿರುವುದಾಗಿ ಹೇಳಿದ ಅವರು, ಮೂಢನಂಬಿಕೆಗಳಿಂದ ಹೊರ ಬರುವ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಸಮಾಜ ಪ್ರಗತಿ ಕಾಣುವಂತೆ ಸಲಹೆ ನೀಡಿದರು.
ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯಭಾಮ,ಮಾತನಾಡಿ ಸಮುದಾಯದ ಜನರಿಗೆ ಶಿಕ್ಷಣವೇ ಶಕ್ತಿ ಎಂಬುದನ್ನು ಮನವರಿಕೆ ಮಾಡಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರು ಹೆಚ್ಚು ಶ್ರಮಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಪ್ರಗತಿ ಕಾಣಲು ಸಾಧ್ಯ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಮನ್ನಣೆ ಸಿಗಲಿದೆ ಎಂದರು. ತಾಲೂಕು ಗೊಲ್ಲ ಸಮಾಜದ ಅಧ್ಯಕ್ಷ ನರಸಿಂಹಪ್ಪ ಸಮಾಜದ ಪ್ರಗತಿ ಕುರಿತು ಮಾತನಾಡಿದರು. ಇದೇ ವೇಳೆ ತಾಲೂಕು ಕಾಡುಗೊಲ್ಲ ಯುವಸೇನೆ ಸಂಘದಿಂದ ಹೆಚ್ಚು ಅಂಕ ವಡೆದ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕ ಪಡೆದ 95ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿ ಸತ್ಕರಿಸಲಾಯಿತು.ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಕಾಡುಗೊಲ್ಲ ಯುವಸೇನೆ ಸಂಘದ ಅಧ್ಯಕ್ಷ ದಿವ್ಯತೇಜ ಯಾದವ್, ಸಂಘದ ಗೌರವಾಧ್ಯಕ್ಷ ವಡ್ಡರಹಟ್ಟಿ ರಾಮಲಿಂಗಪ್ಪ, ಶಿವಲಿಂಗಪ್ಪ, ಮಾಜಿ ಎಂಎಲ್‌ಸಿ ಗುಂಡುಮಲೆ ತಿಪ್ಪೇಸ್ವಾಮಿ, ಬೆಸ್ತರಹಳ್ಳಿ ಕೃಷ್ಣಮೂರ್ತಿ, ಸಣ್ಣ ನಾಗಣ್ಣ, ವಿನೋದ್‌ರಾಜ್, ಚಂದ್ರು, ಮೋಹನ್, ಸಣ್ಣನಾಗಪ್ಪ, ನಾಗೇಶ್, ನವೀನ್, ಕರಿಯಣ್ಣ, ದೊಡ್ಡಯ್ಯ, ನಾಗರಾಜು, ಪ್ರಕಾಶ್, ಇತರರಿದ್ದರು.