₹ 300 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ತಂಗಡಗಿ

KannadaprabhaNewsNetwork |  
Published : May 25, 2025, 01:48 AM IST
154 | Kannada Prabha

ಸಾರಾಂಶ

ನಾನು ಬಸವರಾಜ ದಢೇಸೂಗುರ ಗೆ ಗನ್‌ಮ್ಯಾನ್ ನೀಡಲು ತಡೆಯೊಡ್ಡಿಲ್ಲ. ಗನ್‌ಮ್ಯಾನ್ ನೀಡಲು ಪೊಲೀಸ್ ಇಲಾಖೆಯಲ್ಲಿ ತನ್ನದೆಯಾದ ನಿಯಮಗಳಿವೆ. ಇದರಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಪ್ರತಿಯೊಂದರಲ್ಲಿ ನನ್ನ ಹೆಸರು ಬಳಸುವುದು ಒಳ್ಳೆಯದಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನಕಗಿರಿ/ನವಲಿ:

ಮುಂಬರುವ ತಿಂಗಳೊಳಗಾಗಿ ₹ ೩೦೦ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ನವಲಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನವಲಿಯ ೧೦ ಎಕರೆ ಭೂಮಿಯಲ್ಲಿ ₹ ೨೨ ಕೋಟಿ ವೆಚ್ಚದಲ್ಲಿ ಮೊರಾರ್ಜಿ ಶಾಲಾ ಕಟ್ಟಡ ನಿರ್ಮಾಣವಾಗಲಿದೆ. ಬಾಲಕಿಯರ, ಬಾಲಕರ ವಸತಿ ನಿಲಯ, ಶಾಲಾ ಕಟ್ಟಡ (ನೆಲ ಮತ್ತು ೧ನೇ ಮಹಡಿ), ಅಡುಗೆ ಮತ್ತು ಭೋಜನಾಲಯ, ಸಭಾಂಗಣ, ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಸ್ನಾನ, ಶೌಚಗೃಹ, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಆಟದ ಮೈದಾನ, ಸೋಲಾರ್ ದೀಪ ಅಳವಡಿಕೆ, ಕಾಂಪೌಂಡ್ ನಿರ್ಮಾಣ, ವಿದ್ಯುತ್ ಸಬ್ ಸ್ಟೇಷನ್, ಕಾವಲುಗಾರರ ಕೊಠಡಿ, ಒಳ ಚರಂಡಿ, ಸಂಸ್ಕರಣಾ ಘಟಕ, ಪೀಠೋಪಕರಣ ಒದಗಿಸಲು ಈಗಾಗಲೇ ಸರ್ಕಾರ ಅನುದಾನ ನೀಡಿದೆ. ಸೃಷ್ಟಿ ಕನ್‌ಸ್ಟ್ರಷನ್‌ ನವರು ಗುತ್ತಿಗೆ ಪಡೆದಿದ್ದು,

ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆಗೆ ₹ ೧೦ ಕೋಟಿ ಬಿಡುಗಡೆಯಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಸೂಳೇಕಲ್ ಬಳಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ₹ ೩ ಕೋಟಿ, ಕನಕಗಿರಿ-ಕಾರಟಗಿ ನಗರಗಳಿಗೆ ಕುಡಿಯುವ ನೀರಿಗಾಗಿ ₹ ೧೬೨ ಕೋಟಿ, ಕಾರಟಗಿಯಲ್ಲಿ 100 ಹಾಸಿಗೆ ಆಸ್ಪತ್ರೆಗೆ ₹ ೪೨ ಕೋಟಿ ಅನುದಾನ ಮಂಜೂರಾಗಿದ್ದು, ತಿಂಗಳೊಳಗಾಗಿ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಸಚಿವರು ತಿಳಿಸಿದರು.

ಈ ವೇಳೆ ತಹಸೀಲ್ದಾರ್‌ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಗ್ರಾಪಂ ಉಪಾಧ್ಯಕ್ಷ ನಾಗರಾಜ ತಳವಾರ, ಸದಸ್ಯ ದೇವರಾಜ ಉದ್ದಿಹಾಳ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಘಟಕದ ಅಧ್ಯಕ್ಷ ಹಜರತಹುಸೇನ, ಪ್ರಮುಖರಾದ ಗಂಗಾಧರಸ್ವಾಮಿ, ಶರಣೇಗೌಡ, ಶರಣಪ್ಪ ಭತ್ತದ, ಅನಿಲ ಬಿಜ್ಜಳ, ವಿರೂಪಾಕ್ಷ ಆಂಧ್ರ, ವಿರೂಪಣ್ಣ ಕಲ್ಲೂರು, ಸಿದ್ದನಗೌಡ ಪಾಟೀಲ್, ವೀರೇಶ ಹರಿಜನ ಸೇರಿದಂತೆ ಇತರರಿದ್ದರು.

ಗನ್‌ಮ್ಯಾನ್ ಪಡೆಯುವ ರೂಲ್ಸ್ ತಿಳಿದುಕೊಳ್ಳಲಿ:ಮಾಜಿ ಶಾಸಕ ಬಸವರಾಜ ದಢೇಸೂಗುರ ಅವರು ಗನ್‌ಮ್ಯಾನ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಅವರಿಗೆ ಗನ್‌ಮ್ಯಾನ್ ನೀಡಲು ತಡೆಯೊಡ್ಡಿಲ್ಲ. ಗನ್‌ಮ್ಯಾನ್ ನೀಡಲು ಪೊಲೀಸ್ ಇಲಾಖೆಯಲ್ಲಿ ತನ್ನದೆಯಾದ ನಿಯಮಗಳಿವೆ. ಇದರಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಪ್ರತಿಯೊಂದರಲ್ಲಿ ನನ್ನ ಹೆಸರು ಬಳಸುವುದು ಒಳ್ಳೆಯದಲ್ಲ. ಈ ಹಿಂದೆ ಪೊಲೀಸ್ ಇಲಾಖೆ ನನಗೆ ಬೆದರಿಕೆ ಹೊಡ್ಡಿರುವುದನ್ನು ಪರಿಶೀಲಿಸಿಯೇ ಗನ್‌ಮ್ಯಾನ್ ನೀಡಿದ್ದರು. ಗನ್‌ಮ್ಯಾನ್ ನೀಡುವ ಮತ್ತು ಹಿಂಪಡೆಯುವ ಅಧಿಕಾರ ನನಗಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದು ನಿಯಮ ಏನಿದೆ? ಎಂಬುದನ್ನು ತಿಳಿದುಕೊಳ್ಳಲಿ ಎಂದು ದಢೇಸೂಗುರಗೆ ತಿರುಗೇಟು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ