ವಿರೋಧಿಗಳ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ

KannadaprabhaNewsNetwork |  
Published : Nov 14, 2025, 01:00 AM IST
60 | Kannada Prabha

ಸಾರಾಂಶ

ಕೆ.ಆರ್. ನಗರ ಪಟ್ಟಣದಲ್ಲಿ ಗುಂಪು ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿ ಆನಂತರ ಜಾಗದ ಸೂಕ್ತ ದಾಖಲೆ ಸಿದ್ಧಪಡಿಸದೆ ಫಲಾಯನ ಮಾಡುವವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಳೆದ 30 ತಿಂಗಳಿನಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆದುಕೊಳ್ಳುತ್ತಿರುವ ನಾನು ರಾಜಕೀಯ ವಿರೋಧಿಗಳ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಮತ್ತು ಜೆಡಿಎಸ್ ಮುಖಂಡರನ್ನು ಶಾಸಕ ಡಿ. ರವಿಶಂಕರ್ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಲಾಲನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಮತ್ತು 5 ಲಕ್ಷ ರೂ.ಗಳಲ್ಲಿ ಕೈಗೊಂಡಿರುವ ಸಿದ್ದೇಶ್ವರ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, 15 ವರ್ಷ ಅಧಿಕಾರದಲ್ಲಿದ್ದಾಗ ಕೆಲಸ ಮಾಡದೆ ಈಗ ಅಪಪ್ರಚಾರ ಮಾಡುತ್ತಿರುವವರಿಗೆ ಜನರೇ ತಕ್ಕ ಬುದ್ದಿ ಕಲಿಸುತ್ತಾರೆ ಎಂದರು.

ಕೆ.ಆರ್. ನಗರ ಪಟ್ಟಣದಲ್ಲಿ ಗುಂಪು ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿ ಆನಂತರ ಜಾಗದ ಸೂಕ್ತ ದಾಖಲೆ ಸಿದ್ಧಪಡಿಸದೆ ಫಲಾಯನ ಮಾಡುವವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವಾಗ ಇದೇ ರೀತಿ‌ಅಡ್ಡಿಪಡಿಸಲು ಮುಂದಾದರೆ ನಮ್ಮ ಪಕ್ಷದ ಕಾರ್ಯಕರ್ತರು ಸದೃಢರಾಗಿದ್ದು ಅದಕ್ಕೆ ತಕ್ಕ ಉತ್ತರ‌ನೀಡಲು ಸಿದ್ದರಾಗಿದ್ದಾರೆ ಎಂದು ಅವರು ಎಚ್ಚರಿಸಿದರು.

600 ಕೋಟಿ ರೂ. ಅನುದಾನ ತಂದು ಕ್ಷೇತ್ರದಲ್ಲಿ‌ಅಭಿವೃದ್ದಿ‌ಗೆ ಕಂಕಣ ಬದ್ದನಾಗಿ‌ಕೆಲಸ ಮಾಡುತ್ತಿರುವವ ನನಗೆ 10 ಕೋಟಿ ರೂ. ಕೆಲಸ ಮತ್ತು‌ದೇವಾಲಯದ ಅಭಿವೃದ್ಧಿಗೆ ಚಾಲನೆ ನೀಡುವ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇದೇಯೇ ಎಂದು ಅವರು ಪ್ರಶ್ನಿಸಿದರು.

ನಿಮ್ಮ ಅವಧಿಯಲ್ಲಿ‌ಮಂಜೂರಾಗಿದ್ದ ಕೆಲವು ಕಾಮಗಾರಿಗೆ ಚಾಲನೆ ನೀಡದೆ ನೆನೆಗುದಿಗೆ ಬೀಳುವಂತೆ ಮಾಡಿದ್ದೀರಿ. ಆದರೆ ಅವುಗಳನ್ನು‌ಮುಂದುವರೆಸುವ ಜವಾಬ್ದಾರಿ ಶಾಸಕನಾಗಿರುವ ನನಗಲ್ಲದೆ ಇನ್ಯಾರಿಗೆ ಇದೆ ಎಂದ ಡಿ. ರವಿಶಂಕರ್ ಅವರು ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು ನಿಮಗೆ ಕ್ಷೇತ್ರದ‌ಜನರ ಮೇಲೆ ನಿಜವಾದ ಕಾಳಜಿ ಇದ್ದಲ್ಲಿ ಅನುದಾನ ತಂದು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಎಂದು ಅವರು ಸಲಹೆ ನೀಡಿದರು.

ನಾನು ಮಾಡುತ್ತಿರುವ ಅಭಿವೃದ್ಧಿ ಕಾರ್ಯ ಸಹಿಸದೆ ಲಾಲನಹಳ್ಳಿ ಗ್ರಾಮಕ್ಕೆ ಬೇರೆ ಗ್ರಾಮಗಳ. ನಿಮ್ಮ ಪಕ್ಷದ ಮುಖಂಡರನ್ನು ಕರೆಯಿಸಿ ಗೊಂದಲ‌ಸೃಷ್ಟಿಸಲು ಪ್ರಯತ್ನಿಸಿದ್ದು ಹತಾಶ ರಾಜಕಾರಣದ ಪ್ರತೀಕ ಎಂದು ಟೀಕಿಸಿದರಲ್ಲದೆ ಕೆಲಸದ ವಿಚಾರದಲ್ಲಿ ಕ್ಷೇತ್ರದ‌ಜನತೆ ಯಾವುದೇ ಪ್ರಶ್ನೆ ಕೇಳಿದರು ಉತ್ತರಿಸಲು ಸಿದ್ಧನಾಗಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮಿಶ್ರ ಸರ್ಕಾರದಲ್ಲಿ ನೀವು ಸಚಿವರಾಗಿದ್ದಾಗ‌ಮಂಜೂರಾಗಿದ್ದ ಅನುದಾನ ರದ್ದುಗೊಂಡ ಬಳಿಕ ಮತ್ತೆ ಆ ಹಣವನ್ನು ಹಿಂದಕ್ಕೆ ತರಲು ಯಾಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಗೈದ ಶಾಸಕರು, ಜೆಡಿಎಸ್ ಪಕ್ಷದವರು ಬಂದರೂ ನಾನು ಅವರಿಗೆ ಶಿಫಾರಸ್ಸು ಪತ್ರ‌ನೀಡಿ ಕೆಲಸ ಮಾಡಿಲ್ಲವೇ ಎಂದು ಸೂಚ್ಯವಾಗಿ ನುಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಜಿಪಂ ಮಾಜಿ ಸದಸ್ಯರಾದ ಸಿದ್ದಪ್ಪ, ಮಾರ್ಚಹಳ್ಳಿ ಶಿವರಾಮು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಮೈಮುಲ್ ನಿರ್ದೇಶಕ ಮಲ್ಲಿಕಾ ರವಿಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ. ರಮೇಶ್, ವಕ್ತಾರ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ನಿರ್ದೇಶಕ ಎಚ್.ಪಿ. ಪ್ರಶಾಂತ್, ಎಲ್.ಪಿ. ರವಿಕುಮಾರ್, ಗ್ರಾಪಂ ಸದಸ್ಯ ಉಮೇಶ್, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಇದ್ದರು.

PREV

Recommended Stories

ಸತ್ಯ ಸಾಯಿ ಗ್ರಾಮಕ್ಕೆ ನೀರು ಪೂರೈಸಲು ಸರ್ಕಾರ ಬದ್ಧ
ಕಾಡುಪ್ರಾಣಿಗಳ ಹಾವಳಿಯಿಂದ ತಡೆಯಲು ಆಗ್ರಹ