ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋಂಸ್ಟೇಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಲ್ಲಿ ಅನಧಿಕೃತ ಹೋಂಸ್ಟೇಗಳೂ ಇರುವ ಬಗ್ಗೆ ಮಾಹಿತಿ ಇದೆ. ಹೆಚ್ಚಿನ ಮನೆಗಳು ಹೋಂಸ್ಟೇಗಾಗಿ ಬಳಕೆ ಮಾಡಿಕೊಳ್ಳುವುದರಿಂದ ಇಲ್ಲಿ ವಾಸಕ್ಕೆ ಬಾಡಿಗೆಗೆ ಮನೆ ಸಿಗುತ್ತಿಲ್ಲ ಎನ್ನುವ ಮಾಹಿತಿಯೂ ಗಮನಕ್ಕೆ ಬಂದಿದೆ. ಹಾಗಾಗಿ ಅಕ್ಕಪಕ್ಕದ ರಾಜ್ಯಗಳಲ್ಲಿ ಹೋಂಸ್ಟೇ ವ್ಯವಸ್ಥೆ ಹೇಗೆ ಕಾರ್ಯಾಚರಿಸುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಿ ಕೊಡಗಿನಲ್ಲೂ ಯಾವುದೇ ಸಮಸ್ಯೆ ಆಗದಂತೆ ಹೋಂಸ್ಟೇ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.2018 ಮತ್ತು ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ವೇಳೆ ಸಂತ್ರಸ್ತರಾದವರ ಪೈಕಿ ಹಲವರಿಗೆ ಇನ್ನೂ ಮನೆ ಸಿಕ್ಕಿಲ್ಲ. ಕೆಲವರಿಗೆ ನಿವೇಶನ ಹಂಚಿಕೆ ಆಗಿದ್ದರೂ ಅವರಿಗೆ ಹಸ್ತಾಂತರ ಆಗಿಲ್ಲ ಎನ್ನುವ ಬಗ್ಗೆ ಮಾಹಿತಿ ಇದೆ. ಮಾದಾಪುರ ಬಳಿ ಇನ್ಫೋಸಿಸ್ ಸಹಯೋಗದಲ್ಲಿ ನಿರ್ಮಿಸಿರುವ ಮನೆಗಳ ಸ್ಥಿತಿ ಗತಿಯನ್ನೂ ಪರಿಶೀಲಿಸಲಾಗುವುದು. ಸಂತ್ರಸ್ತರಿಗೆ ಶೀಘ್ರ ವಸತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮಡಿಕೇರಿಯಲ್ಲಿ ವಾಹನ ದಟ್ಟಣೆ ಸಮಸ್ಯೆ ಇದೆ. ಪಾರ್ಕಿಂಗ್‌ಗೂ ಜಾಗ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಹರಿಸಲಾಗುವುದು. ನದಿ ತೀರದ ಬಫರ್ ಝೋನ್‌ಗಳಲ್ಲಿ ಮನೆ ಕಟ್ಟುವ ಸಂದರ್ಭ ಅನುಮತಿ ನೀಡುವ ವೇಳೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಲಾಗುವುದು. ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲೂ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದರು.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಇದ್ದರು. ಸಂಘದ ಖಜಾಂಚಿ ಸುನಿಲ್ ಪೊನ್ನೇಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗೋಪಾಲ್ ಸೋಮಯ್ಯ ವಂದಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.