ಸರ್ಕಾರದಿಂದ ಗ್ಯಾರಂಟಿ ಜತೆಗೆ ಅಭಿವೃದ್ಧಿ ಕೆಲಸ

KannadaprabhaNewsNetwork | Published : Feb 26, 2025 1:03 AM

ಸಾರಾಂಶ

ಭಟ್ಕಳ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಸರ್ಕಾರದಿಂದ ಕೇಳಲಾಗಿದೆ. ಈಗಾಗಲೇ 913 ಮನೆಗಳು ಮಂಜೂರಿಯಾಗಿದೆ

ಭಟ್ಕಳ: ರಾಜ್ಯ ಸರ್ಕಾರ ಜನತೆಗೆ 5 ಗ್ಯಾರಂಟಿ ಯೋಜನೆ ಕೊಟ್ಟು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 24 ಗಂಟೆ ವಿದ್ಯುತ್ ಮತ್ತು ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

ಅವರು ಮಂಗಳವಾರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಜಾಲಿ ಪಪಂ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಭಟ್ಕಳ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಸರ್ಕಾರದಿಂದ ಕೇಳಲಾಗಿದೆ. ಈಗಾಗಲೇ 913 ಮನೆಗಳು ಮಂಜೂರಿಯಾಗಿದೆ. ಮತ್ತೆ 2 ಸಾವಿರ ಮನೆಗಳು ಬಂದರೆ ಸೂರಿಲ್ಲದವರಿಗೆ ಸೂರು ಒದಗಿಸಿದಂತಾಗುತ್ತದೆ. ಜಾಲಿ ಪಪಂ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ ಸಚಿವರು, ಈಗಾಗಲೇ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ₹87 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಿಯಾಗುವ ವಿಶ್ವಾಸ ಇದೆ ಎಂದರು.

ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ₹37 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭಿಸಲಾಗಿದೆ. ನಗರೋತ್ಥಾನ ಕಾಮಗಾರಿ ನಡೆಯುತ್ತಿದೆ. ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರಾದ ಯೋಜನೆಗಳನ್ನು ಈಗ ಅನುಷ್ಠಾನಗೊಳಿಸುವಂತಾಗಿದೆ. ಬಂದರು-ಸಾಗರ ರಸ್ತೆಯನ್ನು ₹25 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ವಸತಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಎಲ್ಲವನ್ನೂ ಮಾಡಬಹುದಾಗಿದೆ. ಜನರು ಹೇಳದೇ ಇದ್ದರೂ ನಾನೇ ಖುದ್ದಾಗಿ ಸ್ಥಳಕ್ಕೆ ತೆರಳಿ ಅಗತ್ಯ ಕೆಲಸ ಮಾಡುವಲ್ಲಿ ಮುಂದಾಗಿದ್ದೇನೆ ಎಂದರು.

ಉಪಸ್ಥಿತರಿದ್ದ ಜಾಲಿ ಪಪಂ ಉಪಾಧ್ಯಕ್ಷ ಇಮ್ರಾನ್ ಲಂಕಾ ಜಾಲಿ ಪಪಂ ವ್ಯಾಪ್ತಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಾಲಿ ಪಪಂ ಅಧ್ಯಕ್ಷೆ ಹಪ್ಝಾ ಹುಜೈಫಾ ಮಾತನಾಡಿದರು. ವೇದಿಕೆಯಲ್ಲಿ ಅಭಿಯಂತರ ಭಾಸ್ಕರ ಗೌಡ, ಅರವಿಂದ ರಾವ್, ಭಟ್ಕಳ ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ, ಜಾಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ, ಪಪಂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಎನ್.ಮಂಜಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ನಿರೂಪಿಸಿದರು. ಸಿಬ್ಬಂದಿ ನಾರಾಯಣ ನಾಯ್ಕ ವಂದಿಸಿದರು.

Share this article