-ರಾಯಚೂರು-ತಿಂಥಣಿ ಮಾರ್ಗದಲ್ಲಿ ಅವೈಜ್ಞಾನಿಕ, ಅನಾವಶ್ಯಕ ಟೋಲ್ ಗೇಟ್ ನಿರ್ಮಾಣಕ್ಕೆ ಖಂಡನೆ ।ಸಂಸದ ಜಿ.ಕುಮಾರ ನಾಯಕಗೆ ಮನವಿ
ಕನ್ನಡಪ್ರಭ ವಾರ್ತೆ ದೇವದುರ್ಗ
ರಾಯಚೂರು-ತಿಂಥಣಿ ರಸ್ತೆ ಮಾರ್ಗದಲ್ಲಿ ಅವೈಜ್ಞಾಣಿಕ ಹಾಗೂ ಅನಾವಶ್ಯಕ ಟೋಲ್ ಗೇಟ್ ನಿರ್ಮಾಣ ಖಂಡಿಸಿ, ರಾಜ್ಯ ರಸ್ತೆ ಸಂಘಟನೆ ಪದಾಧಿಕಾರಿಗಳು ದಿಢೀರ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.ರಾಯಚೂರು ರಸ್ತೆ ಮಾರ್ಗದಲ್ಲಿ ಕಾಕರಗಲ್ ಹೊರವಲಯದಲ್ಲಿರುವ ಟೋಲ್ ಗೇಟ್‌ಗಳ ಬಳಿ ಮಂಗಳವರ ರಸ್ತೆ ತಡೆ ನಡೆಸಿ, ಸಂಸದ ಜಿ.ಕುಮಾರ ನಾಯಕ ಹಾಗೂ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿದರು. ಕೇವಲ 73 ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್ ಗಳನ್ನು ನಿಯಮಬಾಹಿರ ನಿರ್ಮಿಸಲಾಗುತ್ತದೆ. ಈ ಪ್ರದೇಶದಲ್ಲಿ ವಾಣಿಜ್ಯ, ಕೈಗಾರಿಕೆ ಸೇರಿದಂತೆ ಹೆಚ್ಚುವರಿ ವಾಹನಗಳ ಸಂಚಾರವೇ ಇರುವದಿಲ್ಲ.
ಅತಿವೃಷ್ಠಿ, ಅನಾವೃಷ್ಠಿ ಹಾಗೂ ನೀರಿನ ಲಭ್ಯತೆ ಇರದೇ ರೈತರು ಬೆಳೆ ಹಾನಿ, ಬೆಳೆಗೆ ತಕ್ಕ ದರ ದೊರಕದೇ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಠ ಪರಿಸ್ಥಿತಿಯಲ್ಲಿ ರೈತರಿಗೆ ಗಾಯದ ಮೇಲೆ ಬರೆ ಯೆಳೆದಂತಾಗಿದೆ. ಕೂಡಲೇ 15ದಿನಗಳ ಒಳಗಾಗಿ ಈ ಟೋಲ್ ಗೇಟ್‌ಗಳನ್ನು ರದ್ದು ಪಡಿಸಬೇಕು, ಇಲ್ಲದೇ ಹೋದಲ್ಲಿ ರೈತರೇ ಮುಂದಾಗಿ ತೆರವುಗೊಳಿಸಲಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಬೇಡಿಕೆ ನ್ಯಾಯಯುತವಾಗಿದ್ದು, ಈ ರಸ್ತೆ ಮಾರ್ಗದಲ್ಲಿ ಟೋಲ್ ಗೇಟ್‌ಗಳ ನಿರ್ಮಾಣ ಅನಾವಶ್ಯಕ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
-------------------------