ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿ ಕೋಟ್ಯಂತರ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : Sep 05, 2025, 01:00 AM IST
4ಕೆಎಂಎನ್ ಡಿ21 | Kannada Prabha

ಸಾರಾಂಶ

ಈಗಾಗಲೇ ಕ್ಷೇತ್ರಕ್ಕೆ ನಮ್ಮ ಸರ್ಕಾರದಿಂದ 50 ಕೋಟಿ ರು. ಬಿಡುಗಡೆ ಮಾಡಿದ್ದು, ಅದರಲ್ಲಿ ಪಟ್ಟಣ ಪುರಸಭಾ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 4 ಕೋಟಿ ರು.ಗಳನ್ನು ಈಗಾಗಲೇ ಕಾಮಗಾರಿಗೆ ಹಾಕಲಾಗಿದೆ. ಇನ್ನು 7 ಕೋಟಿಯಷ್ಟು ಹಣವಿದ್ದು, ರಸ್ತೆ ಕಾಮಗಾರಿ ಟೆಂಡರ್ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭಾ ವ್ಯಾಪ್ತಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಪಟ್ಟಣದ ಬಂಡಿಸಿದ್ದೇಗೌಡ ವೃತ್ತದ ಬಳಿ 23.44 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಸರ್ಕಾರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಶ್ರೀರಂಗಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಹಾಗೂ 15.55 ಕೋಟಿ ರು. ವೆಚ್ಚದಲ್ಲಿ ಹಸಿರು ನ್ಯಾಯ ಮಂಡಳಿ, ಪರಿಸರ ಪರಿಹಾರ ನಿಧಿ ಪ್ರಾಧಿಕಾರ ಯೋಜನೆಯಡಿಯಲ್ಲಿ ಶ್ರೀರಂಗಪಟ್ಟಣಕ್ಕೆ ಎರಡನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಯ ಭೂಮಿ ನೇರವೇರಿಸಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣ ಅಭಿವೃದ್ಧಿಗೆ ಹಲವು ಕಾಮಗಾರಿಗೆ ಒತ್ತು ನೀಡಲಾಗಿದೆ. ಕೆಲವರು ನನ್ನ ಅಭಿವೃದ್ಧಿ ಕಾರ್ಯದ ಬಗ್ಗೆ ಹೀಯಾಳಿಸಿ ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರ ಸಿಕ್ಕಿದೆ. ನಮ್ಮ ಜನರ ಮಧ್ಯೆ ಇದ್ದು ನಾನು ಕೆಲಸಗಳ ಮಾಡುತ್ತಿದ್ದೇನೆ ಎಂದರು.

ಈಗಾಗಲೇ ಕ್ಷೇತ್ರಕ್ಕೆ ನಮ್ಮ ಸರ್ಕಾರದಿಂದ 50 ಕೋಟಿ ರು. ಬಿಡುಗಡೆ ಮಾಡಿದ್ದು, ಅದರಲ್ಲಿ ಪಟ್ಟಣ ಪುರಸಭಾ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 4 ಕೋಟಿ ರು.ಗಳನ್ನು ಈಗಾಗಲೇ ಕಾಮಗಾರಿಗೆ ಹಾಕಲಾಗಿದೆ. ಇನ್ನು 7 ಕೋಟಿಯಷ್ಟು ಹಣವಿದ್ದು, ರಸ್ತೆ ಕಾಮಗಾರಿ ಟೆಂಡರ್ ನಡೆಯುತ್ತಿದೆ ಎಂದರು.

ಪ್ರತಿ ಮನೆ ಬಾಗಿಲಿಗೆ ನೀರಿನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಜೆಜೆಎಂನ ಯೋಜನೆಯಿಂದ ಸಂಪೂರ್ಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಲ್ಲದೆ ಒಳ ಚರಂಡಿ ಯೋಜನೆಯಿಂದ ಪಟ್ಟಣದಲ್ಲಿ ಈ ಹಿಂದೆ ಕಾಮಗಾರಿ ನಡೆದು ಅರ್ಧಕ್ಕೆ ನಿಂತಿರುವ ಒಳಚರಂಡಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವುದು, ಒಳಚರಂಡಿಗಳ ದುರಸ್ಥಿ ಸೇರಿದಂತೆ ಹೊಸದಾಗಿ ಪಟ್ಟಣದ ಬೀದಿಗಳಿಗೆ ವಿಸ್ತರಿಸಿ ಕಾಮಗಾರಿ ನಡೆಸಲಾಗುತ್ತದೆ ಎಂದರು.

ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರು ಹಾಗೂ ಮನೆ ನಿರ್ಮಿಸಿ ಹಕ್ಕು ಪತ್ರ ಇಲ್ಲದ ಫಲಾನುಭವಿಗಳನ್ನು ಪುರಸಭೆ ವತಿಯಿಂದ ಈಗಾಗಲೇ ಗುರುತಿಸಲಾಗಿದೆ. ಶೀಘ್ರ ಫಲಾನುಭವಿಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಉಪ ನಿರ್ದೇಶಕಿ ರೂಪಶ್ರೀ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಸವಿತಾ, ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ, ಲಕ್ಷ್ಮೀಶ್, ತಾಪಂ ಇಒ ವೇಣು, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯರಾದ ಕೃಷ್ಣಪ್ಪ, ಶಿವು, ದಯಾನಂದ್, ನಂದೀಶ್, ಎಸ್.ಟಿ ರಾಜು, ಮಂಗಳಮ್ಮ, ವಸಂತಕುಮಾರಿ, ಮುಖ್ಯಾಧಿಕಾರಿ ಬಿ.ಜಿ. ಸತೀಶ ಸೇರಿ ಇತರ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌