ಅವರ ಸುಳ್ಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ

KannadaprabhaNewsNetwork |  
Published : Jul 20, 2025, 01:15 AM IST
12 | Kannada Prabha

ಸಾರಾಂಶ

ಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಯವರಿಗೆ ಇವತ್ತಿನ ಅಭಿವೃದ್ಧಿ ಕಾರ್ಯಗಳೇ ಉತ್ತರ.

19ಎಂವೈಎಸ್‌ 12 - ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಡಾ.ಎಚ್‌.ಸಿ. ಮಹದೇವಪ್ಪ, ಕೆ.ಎಚ್‌. ಮುನಿಯಪ್ಪ, ಕೆ.ಜೆ. ಜಾರ್ಜ್‌, ಶಿವರಾಜ ತಂಗಡಿ, ಕೆ. ವೆಂಕಟೇಶ್‌, ಡಾ.ಜಿ. ಪರಮೇಶ್ವರ್‌, ತನ್ವೀರ್‌ಸೇಠ್‌, ಸುನಿಲ್‌ ಬೋಸ್‌, ಕೆ. ಹರೀಶ್‌ಗೌಡ, ಡಿ. ರವಿಶಂಕರ್‌, ಪುಟ್ಟರಂಗಶೆಟ್ಟಿ ಮೊದಲಾದವರು ಇದ್ದಾರೆ. ಚಿತ್ರ- ಅನುರಾಗ್‌ ಬಸವರಾಜ್‌

---

19ಎಂವೈಎಸ್‌13 - ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಾಧನಾ ಸಮಾವೇಶದಲ್ಲಿ ವಿವಿಧ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

---

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ರಾಜ್ಯಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2,578 ಕೋಟಿ ರೂ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ರಾಜ್ಯದ ಜನರಿಗೆ ಸರಣಿ ಸುಳ್ಳುಗಳ ಮೂಲಕ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಒಂದೇ ವೇದಿಕೆಗೆ ಬರಲಿ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ನಡೆಸೋಣ. ನಾನೂ ಬರುತ್ತೇನೆ ಎಂದು ಸವಾಲು ಹಾಕಿದರು.

ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಯವರಿಗೆ ಇವತ್ತಿನ ಅಭಿವೃದ್ಧಿ ಕಾರ್ಯಗಳೇ ಉತ್ತರ. ಬಿಜೆಪಿ-ಜೆಡಿಎಸ್ ನವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅತೀ ಮತ್ಸರ ಪಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಪ್ರತೀ ಬಾರಿ ಹಿಂಬಗಿಲಿನಿಂದ ಅಧಿಕಾರ ಹಿಡಿಯುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿ ಸ್ವಂತ ಶಕ್ತಿ ಮೇಲೆ ಯಾವತ್ತೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ರಾಜ್ಯದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಳ್ಳದ ಇವರಿಗೆ ಇವರಿಗೆ ನಮ್ಮ ಸರ್ಕಾರದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಕಟುವಾಗಿ ಟೀಕಿಸಿದರು.

ಜವಾಹರಲಾಲ್ ನೆಹರೂ ಅವಧಿಯಿಂದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವಧಿಯವರೆಗೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಇಡೀ ದೇಶ ಮರೆಯಲು ಸಾಧ್ಯವಿಲ್ಲ ಎಂದರು.

ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ನರೇಗಾ ಎಲ್ಲವೂ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ ಅವಧಿಯಲ್ಲಿ ಇವರು ಏನು ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.

ಮನುವಾದಿಗಳು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಯ ವಿರೋಧಿಗಳು, ಸಂವಿಧಾನದ ವಿರೋಧಿಗಳು. ಆದ್ದರಿಂದ ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮನ್ನು ಟೀಕಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಇಂಧನ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ, ನಗರಾಭಿವೃದ್ಧಿ ಇಲಾಖೆ ಸಚಿವ ರಹೀಂ ಖಾನ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ವಸತಿ ವಿಹಾರ ಧಾಮಗಳ ಅಧ್ಯಕ್ಷ ಸಿ. ಅನಿಲ್ ಕುಮಾರ್, ಸಂಸದ ಸುನಿಲ್ ಬೋಸ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ಶಾಸಕರಾದ ಡಿ. ರವಿಶಂಕರ್, ತನ್ವೀರ್ ಸೇಠ್, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಎಡಿಸಿ ಡಾ.ಪಿ. ಶಿವರಾಜು, ಚಲನಚಿತ್ರ ನಟ ಸಾಧುಕೋಕಿಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

-- ಬಾಕ್ಸ್‌-- 1--

-- ಸರ್ಕಾರದ ಬದ್ಧತೆ--

ನಾವು ಐದು ಗ್ಯಾರಂಟಿಗಳಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷ ಕೋಟಿಯಷ್ಟು ಹಣ ಕೊಟ್ಟಿದ್ದೇವೆ. ನಾವು ಜಾರಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ ಕಾಂಗ್ರೆಸ್ ನವರಿಗೆ ಕೊಟ್ಟಿದ್ದಲ್ಲ. ಬಿಜೆಪಿ-ಜೆಡಿಎಸ್ ಬೆಂಬಲಿಗರು, ಮತದಾರರಿಗೂ ಪ್ರತೀ ದಿನ, ಪ್ರತೀ ತಿಂಗಳೂ ಸರ್ಕಾರದ ನೆರವು ದೊರೆಯುತ್ತಿದೆ. ಮೊನ್ನೆಯಷ್ಟೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಿದ 500ನೇ ಕೋಟಿಯ ಮಹಿಳೆಗೆ ನಾನೇ ಉಚಿತ ಟಿಕೆಟ್ ಕೊಟ್ಟಿದ್ದೇನೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.-- ಬಾಕ್ಸ್ 2--- -- ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ--

ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಪರವಾಗಿ ಇಲ್ಲ. ರಾಜ್ಯದ ಜನರ ಪರವಾಗಿ ಇಲ್ಲ. ಪ್ರತಿ ವರ್ಷ ನಾವು ರಾಜ್ಯದಿಂದ ಕೇಂದ್ರಕ್ಕೆ ಕೊಡುವ ತೆರಿಗೆಯಲ್ಲಿ ರಾಜ್ಯಕ್ಕೆ ಬರುತ್ತಿರುವುದು ಅತ್ಯಲ್ಪ. ನಾವು ಪ್ರತಿ ವರ್ಷ 4.5 ಲಕ್ಷ ಕೋಟಿ ಜಿಎಸ್‌.ಟಿ ನೀಡುತ್ತೇವೆ. ಆದರೆ ಕೇಂದ್ರ ನಮಗೆ ನೀಡುತ್ತಿರುವುದು 65 ಸಾವಿರ ಕೋಟಿ ಮಾತ್ರ. ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದು ಮೋದಿಯವರಿಗೆ ಕೇಳುವ ಧೈರ್ಯ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಸೇರಿ ಸಂಸದರಾದ ಬೊಮ್ಮಾಯಿ ಸೇರಿ ಯಾರಿಗೂ ಇಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿ-ಜೆಡಿಎಸ್ ರಾಜ್ಯದ ಜನಕ್ಕೆ ದ್ರೋಹ ಎಸಗಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ