ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮದ್ದೂರು ಕ್ಷೇತ್ರದಲ್ಲಿ ಕ್ಷೇತ್ರದ ಜನತೆಯ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಲೋಕೋಪಯೋಗಿ ಇಲಾಖೆಯಿಂದ ಕೆ.ಎಂ.ದೊಡ್ಡಿಯಿಂದ ಆಲಭುಜನಹಳ್ಳಿವರೆಗೆ 2.20 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಆಗಬೇಕಿದ್ದ ಕೆಲಸಗಳಿಗೆ ನನ್ನ ಅವಧಿಯಲ್ಲಿ ಚಾಲನೆ ನೀಡುತ್ತಿದ್ದೇನೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳಿಂದ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ನಾನು ಕ್ಷೇತ್ರ ಸಂಚಾರ ಮಾಡುತ್ತಿದ್ದ ವೇಳೆ ಅನೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಮಾಡಿಸಿಕೊಡುವಂತೆ ಮನವಿ ಮಾಡಿದ ಮೇರೆಗೆ ಕಳೆದ ಮೂರು ನಾಲ್ಕು ತಿಂಗಳಿಂದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದರು.ಭಾರತೀನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇರುವುದರಿಂದ ವಾಹನ ದಟ್ಟಣೆಗಳು ಆಲಭುಜನಹಳ್ಳಿ ರಸ್ತೆಯಲ್ಲಿ ಹೆಚ್ಚಾಗಿ ಸಂಚರಿಸುತ್ತಿದೆ. ರಸ್ತೆ ಸಂಪೂರ್ಣವಾಗಿ ಅದ್ವಾನ ಗೊಂಡ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಗುಣಮಟ್ಟದ ರಸ್ತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ಮದ್ದೂರು-ಮಳವಳ್ಳಿ ಹೆದ್ದಾರಿ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರವೇಶ ಮಾಡುವ ಬಸ್‌ಗಳು ಹೊರಗೆ ಹೋಗಲು ಸ್ವಲ್ಪ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಪಶು ಆಸ್ಪತ್ರೆಯ ಖಾಸಗಿ ಕಟ್ಟಡದವರನ್ನು ತೆರವುಗೊಳಿಸಲು ಮಾಲೀಕರ ಮನವೊಲಿಸಲಾಗುವುದು. ಬಸ್ ನಿಲ್ದಾಣದಿಂದ ಒಳಗೆ ಬಂದ ಬಸ್‌ಗಳು ಸುಗಮವಾಗಿ ಹೊರಗೆ ಹೋಗಲು ಅನುಕೂಲವಾಗಲಿದೆ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾಪಂ ಅಧ್ಯಕ್ಷೆ ಸೌಭಾಗ್ಯರಾಮಣ್ಣ, ಸದಸ್ಯರಾದ ಪುಟ್ಟರಾಮು, ರವಿಚಂದ್ರ, ಅಣ್ಣೂರು ಚಂದ್ರಶೇಖರ, ಪಿಣ್ಣಸತೀಶ್, ಮುಖಂಡರಾದ ಮೆಣಸಗೆರೆ ಪ್ರಕಾಶ್, ತೊರೆಬೊಮ್ಮನಹಳ್ಳಿ ವೆಂಕಟೇಶ್, ಯಲಾದಹಳ್ಳಿ ನಿಂಗೇಗೌಡ, ಆಲಭುಜನಹಳ್ಳಿ ಪ್ರಸನ್ನ ಸೇರಿದಂತೆ ಹಲವರಿದ್ದರು.