ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರು ವಿನುತ ಕನ್ವೆನ್ಷನ್ ಹಾಲ್‌ನಲ್ಲಿ ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಎಚ್. ಪಿ. ಶ್ರೀಧರ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಕೃಷಿ, ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರಕೃತಿದತ್ತವಾಗಿ ತಾಲೂಕು ಸಂಪದ್ಭರಿತವಾಗಿದೆ. ಆದರೆ ಅಭಿವೃದ್ಧಿ ಪಥದತ್ತ ಸಾಗುವ ಮೂಲಕ ಹಿಂದುಳಿದ ತಾಲೂಕಿನಿಂದ ಹೊರಬರಬೇಕಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಶೇ.99ರಷ್ಟು ಜನತೆಗೆ ತಲುಪಿಸುವ ಮೂಲಕ ಉತ್ತಮ ಸಾಧನೆ ಮಾಡಿರುವ ಯೋಜನೆ ಅಧ್ಯಕ್ಷ ಶ್ರೀಧರ್ ಗೌಡರು ಮಹಾನ್ ಸಾಧಕರಾಗಿದ್ದಾರೆ. ಜನಸೇವೆಯ ತುಡಿತ ಹೊಂದಿರುವ ಇಂತಹ ಜನಪರ ವ್ಯಕ್ತಿಗಳಿಗೆ ಹೆಚ್ಚಿನ ಅಧಿಕಾರ ಪ್ರಾಪ್ತಿಯಾಗಲಿ ಎಂದು ಆಶಿಸಿದರು.
ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಯುವಕರ ಕಣ್ಮಣಿಯಾಗಿ ಕೆಲಸ ಮಾಡುತ್ತಿರುವ ಶ್ರೀಧರ್ ಗೌಡರ ಹೆಸರು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಬಡ ವಿದ್ಯಾರ್ಥಿಗಳಿಗೆ 16 ಲಕ್ಷ ರು. ವಿದ್ಯಾರ್ಥಿ ವೇತನ ಕೊಡಿಸಿರುವೆ. ಕ್ಷೇತ್ರದಲ್ಲಿ ಎಲ್ಲ ರಾಜಕಾರಣಿಗಳಿಗಿಂತ ಮಿಗಿಲಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಇವರ ಶ್ರೇಷ್ಠ ವ್ಯಕ್ತಿತ್ವಕ್ಕೆ ತಕ್ಕ ಫಲ ಸಿಗುವಂತಾಗಲಿ ಎಂದರು.ಕೊಣನೂರು ಮೊಮ್ಮಿನ್ ಮಸೀದಿ ಧರ್ಮಗುರು ಮೊಹಮದ್ ರಿಜ್ವಾನ್ ಆಶೀರ್ವಚನ ನೀಡಿ, ಜಾತಿ, ಮತದ ಭಾವನೆ ಮನೆಯೊಳಗಿರಬೇಕು. ಮನೆಯಿಂದ ಹೊರಗೆ ದೇಶದ ಹಿತಕ್ಕಾಗಿ ನಾವೆಲ್ಲ ಭಾರತೀಯರು ಎಂಬ ಭಾವನೆಯಿಂದ ಒಟ್ಟಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಶ್ರೀಧರ್ ಗೌಡರ ಸೇವೆ ಸಾಮರಸ್ಯದ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕರೂ ಗೆಲ್ಲಲು ಸಾಧ್ಯವಾಗಲಿಲ್ಲ. ಸೋಲಿಗೆ ಎದೆಗುಂದದೆ ಪಕ್ಷದ ಕಚೇರಿ ತೆರೆದು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಜನರೇ ನನಗೆ ಶಕ್ತಿ, ಅವರಿಗೆ ತೊಂದರೆ ಆಗದಂತೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದಾಗಿದೆ ಎಂದು ತಿಳಿಸಿದರು.