ಹಿಂದಿನ ಶಾಸಕರ ಅಭಿವೃದ್ಧಿ ಕಾರ್ಯಗಳು ಕಳಪೆ: ಶಾಸಕ ಉದಯ್‌ ಆರೋಪ

KannadaprabhaNewsNetwork | Published : Jan 28, 2025 12:48 AM

ಸಾರಾಂಶ

ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಡಿ.ಸಿ.ತಮಣ್ಣನವರ ಅಧಿಕಾರವಧಿಯಲ್ಲಿ ನಡೆದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಗಳ ವೈಫಲ್ಯ ಸಾಕಷ್ಟು ಇರುತ್ತದೆ. ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ ನಂತರ ಅದನ್ನು ಪರಿಶೀಲನೆ ಮಾಡಿ ಗುಣಮಟ್ಟ ಪರಿಶೀಲನೆ ಮಾಡಬೇಕಾದ್ದು,ಮಾಜಿ ಶಾಸಕರ ಕರ್ತವ್ಯವಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ಕ್ಷೇತ್ರದ ಹಿಂದಿನ ಶಾಸಕರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯದಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಶಾಸಕ ಕೆ.ಎಂ. ಉದಯ್ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯರಗನಹಳ್ಳಿ ಹಾಗೂ ತೈಲೂರು ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸುತ್ತಿರುವ ಪರಿಶಿಷ್ಟ ಜಾತಿ ಕಾಲೋನಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಡಿ.ಸಿ.ತಮಣ್ಣನವರ ಅಧಿಕಾರವಧಿಯಲ್ಲಿ ನಡೆದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗಂಭೀರ ಆರೋಪ ಮಾಡಿದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಗಳ ವೈಫಲ್ಯ ಸಾಕಷ್ಟು ಇರುತ್ತದೆ. ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ ನಂತರ ಅದನ್ನು ಪರಿಶೀಲನೆ ಮಾಡಿ ಗುಣಮಟ್ಟ ಪರಿಶೀಲನೆ ಮಾಡಬೇಕಾದ್ದು,ಮಾಜಿ ಶಾಸಕರ ಕರ್ತವ್ಯವಾಗಿತ್ತು. ಅದನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಂಡು ಅಭಿವೃದ್ಧಿ ವಿಚಾರದಲ್ಲಿ ಕೇವಲ ಜಂಬ ಕೊಚ್ಚಿಕೊಂಡರೆ ಮಾತ್ರ ಸಾಲದು. ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡದೆ ನಿರ್ಲಕ್ಷ ವಹಿಸಿದ ಕಾರಣ ಅಧಿಕಾರಿಗಳು ಬೇಕಾಬಿಟ್ಟಿ ಕಳಪೆ ಕಾಮಗಾರಿಗಳನ್ನು ಮಾಡಿದ್ದಾರೆ ಎಂದು ಕಿಡಿಕಾರಿದರು.

ತೈಲೂರು ಕೆರೆ ಏರಿ ಮೇಲೆ ನಿರ್ಮಿಸಿರುವ ವಾಕಿಂಗ್ ಪಾತ್, ಕಬ್ಬಿಣದ ತಡೆಗೋಡೆ ಮತ್ತು ವಿದ್ಯುತ್ ದೀಪಗಳ ಕಂಬಗಳ ಅಳತೆ ಗುಣಮಟ್ಟಗಳಿಂದ ಕೂಡಿಲ್ಲ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾಮಗಾರಿಗಳನ್ನು ನಡೆಸಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಉದಯ್ ತಿಳಿಸಿದರು. ಮದ್ದೂರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಗ್ರಾಮ ಪಂಚಾಯತಿ ಸದಸ್ಯ ಸಂದೇಶ, ಮಾಜಿ ಸದಸ್ಯ ತೈಲೂರು ರಘು, ಮುಖಂಡರಾದ ಅಂಕಪ್ಪ, ಅಣ್ಣಯ್ಯ, ತೈಲೂರು ಸ್ವಾಮಿ, ಕದಲೂರು ಗ್ರಾಮ ಅಧ್ಯಕ್ಷ ತಿಮ್ಮೇಗೌಡ ಇದ್ದರು.

ಬಾಯಿ ಚಪಲಕ್ಕೆ ಮಾತನಾಡುವವರಿಗೆ ಮನ್ನಣೆ ಬೇಡ: ಉದಯ್‌

ಕನ್ನಡಪ್ರಭ ವಾರ್ತೆ ಮದ್ದೂರು

ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕೇವಲ ಬಾಯಿ ಚಪಲಕ್ಕೆ ಮಾತನಾಡುವ ಕಾಂಗ್ರೆಸ್ ನಾಯಕರ ಮಾತಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.

ತಾಲೂಕಿನ ತೈಲೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನಮ್ಮ ಪಕ್ಷದಲ್ಲಿ ಕೆಲವು ವಯಸ್ಸಾದ ನಾಯಕರಿದ್ದಾರೆ. ಪದೇ ಪದೇ ಈನಾಯಕರುಗಳು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಮುಂದಿಟ್ಟುಕೊಂಡು ಬಾಯಿ ಚಪಲಕ್ಕೆ ಮಾತನಾಡುವ ಪವೃತ್ತಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ, ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.

Share this article