ಕನ್ನಡಪ್ರಭ ವಾರ್ತೆ ತುಮಕೂರು
ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳು ಸದ್ದು ಮಾಡಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಜಿಲ್ಲೆಯ ತುರುವೇಕೆರೆ-ತಿಪಟೂರು ತಾಲೂಕಿನ ಗಡಿಭಾಗ ಕುಂದೂರು ಬಳಿ ರಾಷ್ಟ್ರೀಯ ಹೆದ್ದಾರಿ 150ಎ ನ 42.236 ಕಿ.ಮೀ. ಉದ್ಧದ ಕೆ.ಬಿ. ಕ್ರಾಸ್, ಬಾಣಸಂದ್ರ, ತುರುವೇಕೆರೆ, ಮಾಯಸಂದ್ರ, ಚುಂಚನಹಳ್ಳಿ ಹಾಗೂ ನೆಲ್ಲಿಗೆರೆ ಭಾಗದ ಸುಮಾರು 617.28 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರಗಳಿಗೆ ತೆರಿಗೆ ರೂಪದಲ್ಲಿ ಬರುವ ಸಾರ್ವಜನಿಕರ ಹಣವನ್ನು ಇನ್ನೊಂದು ರೀತಿಯಲ್ಲಿ ಅಂದರೆ ಅಭಿವೃದ್ಧಿ ಕಾರ್ಯಗಳ ಮುಖೇನ ಸಾರ್ವಜನಿಕರಿಗೆ ಸಮರ್ಪಿಸುವ ಕೆಲಸಕ್ಕೆ ನಾನು ಒತ್ತು ನೀಡುತ್ತಿದ್ದೇವೆ. ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇರುವುದಿಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿರದಿದ್ದರೆ ಅದನ್ನು ನಾನು ಸಹಿಸುವುದಿಲ್ಲ. ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ರಾಷ್ಟ್ರೀಯ ಹೆದ್ದಾರಿ 150ಎ ಹೆದ್ದಾರಿಯು ರಾಜ್ಯದ ಉತ್ತರದ ಜೇವರ್ಗಿಯಿಂದ ಪ್ರಾರಂಭಗೊಂಡು ದಕ್ಷಿಣದ ಚಾಮರಾಜನಗರದಲ್ಲಿ ಅಂತ್ಯಗೊಳ್ಳುತ್ತದೆ ಎಂದರು. ಈ ರಾಷ್ಟ್ರೀಯ ಹೆದ್ದಾರಿಯನ್ನು 472 ಕಿ.ಮೀ. ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ 2014 ರಿಂದ ಈವರೆಗೆ 6534 ಕೋಟಿ ರು.ಗಳಿಗೆ ಅನುಮೋದನೆ ನೀಡಿದೆ ಎಂದ ಅವರು, ಈಗಾಗಲೇ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು2024 ರ ಮಾರ್ಚ್ ತಿಂಗಳಲ್ಲೇ ಮೈಸೂರಿನಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ 8432.44 ಕೋಟಿ ಮೊತ್ತದ ೨257.89 ಕಿ.ಮೀ ರಾಷ್ಟ್ರೀ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 4069.18 ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದೆ. 44.26ಕಿ.ಮೀ. ಉದ್ದದ ನೆಲಮಂಗಲ-ತುಮಕೂರು ಷಟ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ, ಕೆ.ಬಿ. ಕ್ರಾಸ್, ಬಾಣಸಂದ್ರ, ತುರುವೇಕೆರೆ, ಮಾಯಸಂದ್ರ, ಚುಂಚನಹಳ್ಳಿ ಭಾಗದ ದ್ವಿಪಥ ರಸ್ತೆ ಅಭಿವೃದ್ದಿ ಕಾಮಗಾರಿ ಹಾಗು ಕರಡಿ, ಮಲ್ಲಸಂದ್ರ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.2024-25ನೇ ಸಾಲಿನಲ್ಲಿ 743.26 ಕೋಟಿ ಮೊತ್ತದ 43.20 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು 4 ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದ್ದು, ಸಿರಾ-ಬಡವನಹಳ್ಳಿ ಭಾಗದ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ತುಮಕೂರಿನ ಬಟವಾಡಿಯಿಂದ ಮಲ್ಲಸಂದ್ರವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಗುಣಮಟ್ಟದ ಕಾಮಗಾರಿಯೊಂದಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರ್ಯೋನ್ಮುಖರಾಗಬೇಕು. ಕೇಂದ್ರ ಸಚಿವ ಸೋಮಣ್ಣನವರು ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಅವರು ರೈಲ್ವೆ ಸಚಿವರಾದ ಬಳಿಕ ನೆನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ವೇತುವೆಗಳ ನಿರ್ಮಾಣಕ್ಕೂ ಚಾಲನೆ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಚೌದ್ರಿ ರಂಗಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಧನರಾಜ್, ಶಿವಶಂಕರ್, ತುರುವೇಕೆರೆ ತಹಶೀಲ್ದಾರ್ ಅಹಮದ್ ಕು.ಞ. ಮತ್ತಿತರರು ಉಪಸ್ಥಿತರಿದ್ದರು.