ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಲಿ

KannadaprabhaNewsNetwork | Published : May 5, 2025 12:53 AM

ಸಾರಾಂಶ

ಸಾಣೇಹಳ್ಳಿಯಲ್ಲಿ ಆರಂಭಗೊಂಡ 3 ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟವನ್ನು ಸಿ.ಎನ್.ಅಶೋಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕೇ ಹೋರತು ಕಾನ್ವೆಂಟ್‌ ಗಳಲ್ಲ. ಕಾನ್ವೆಂಟ್‌ ಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಶಕ್ತಿ ನೀಡುವ ಶಿಕ್ಷಣ ತುಂಬುವುದಿಲ್ಲ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್‌ಎಸ್ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಇವರ ಆಶ್ರಯದಲ್ಲಿ ಪ್ರಾರಂಭಗೊಂಡ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಪೋಷಕರು ಮಕ್ಕಳಿಗೆ ಆದರ್ಶವಾಗಬೇಕು. ಸಾಮಾಜಿಕ, ನೈತಿಕ ನೆಲೆಗಟ್ಟು ಕುಸಿಯದ ಹಾಗೆ ನೋಡಿಕೊಳ್ಳಬೇಕು. ಆಗ ನಮ್ಮ ಮಕ್ಕಳು ಮುಂದೆ ನಾಡಿನ ಸಂಪತ್ತಾಗುವರು. ಮಕ್ಕಳಿಗೆ ಭೌತಿಕ ವಸ್ತುಗಳನ್ನು ಕೊಡಿಸುವುದು ಮುಖ್ಯವಲ್ಲ. ಮಕ್ಕಳೇ ಆಸ್ತಿ ಎಂದು ಸರಿಯಾದ ಜ್ಞಾನ, ಸಂಸ್ಕಾರವನ್ನು ಕೊಟ್ಟವರು ಎಷ್ಟು ಜನ? ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳು ಕೊಡುವ ಭಾವನೆ ಪೋಷಕರು ಬೆಳೆಸಿಕೊಳ್ಳಬೇಕು. ಆಗ ಇಂದಿನ ಮಕ್ಕಳು ನಾಳಿನ ಸತ್ಪ್ರೆಜೆಗಳಾಗುವರು ಎಂದರು.

ಸರ್ಕಾರದ ಅನುದಾನವನ್ನು ನಂಬಿಕೊಂಡು ಕೆಲಸ ಮಾಡಿದರೆ ಯಾವ ಕೆಲಸ ಕಾರ್ಯಗಳು ನಿರ್ವಹಿಸಲು ಸಾಧ್ಯವಿಲ್ಲ. ಇದುವರೆಗೂ ಸಾಣೇಹಳ್ಳಿಯಲ್ಲಿ ನಡೆಯುವ ಯಾವುದೇ ಕಾರ್ಯಚಟುವಟಿಕೆಗಳಿಗೆ ಶಾಶ್ವತ ಅನುದಾನ ನೀಡಿಲ್ಲ. ಹಾಗಂತ ಇಲ್ಲಿ ನಡೆಯುವಂಥ ಯಾವ ಕೆಲಸಗಳು ನಿಂತಿಲ್ಲ. ನಾವು ಆ ಎಲ್ಲ ಚಟುವಟಿಕೆಗಳಿಗೆ ಭಕ್ತರನ್ನು ಅವಲಂಬಿಸಿರುತ್ತೇವೆ. ಭಕ್ತರು ಎಲ್ಲ ರೀತಿಯ ಆರ್ಥಿಕ ನೆರವನ್ನು ನೀಡುವುದರಿಂದ ಸಾಣೇಹಳ್ಳಿಯಲ್ಲಿ ಏನೆಲ್ಲಾ ಒಳ್ಳೆಯ ಕಾರ್ಯಗಳು ನಡೆಯಲಿಕ್ಕೆ ಸಾಧ್ಯವಾಗಿದೆ. ಮಕ್ಕಳ ಸಾಹಿತ್ಯ ಪರಿಷತ್ ಇನ್ನು ಚೆನ್ನಾಗಿ ನಡೆಬೇಕೆಂದರೆ ಡೆಪಾಜಿಟ್ ಮಾಡಿಕೊಳ್ಳಬೇಕು. ಆಗ ಇಂತಹ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಯಲು ಸಾಧ್ಯ. ಯಾವುದೇ ಒಂದು ಕಮ್ಮಟ ಯಶಸ್ವಿಯಾಗಬೇಕೆಂದರೆ ಮಕ್ಕಳಿಗೆ ಸರಿಯಾದ ಊಟ, ವಸತಿ, ನೀರು, ತಿಂಡಿ ಸೌಲಭ್ಯಗಳು ಸರಿಯಿರಬೇಕು. ಎಂತಹ ಸಂಪನ್ಮೂಲ ವ್ಯಕ್ತಿಗಳು ಆಹ್ವಾನಿಸುತ್ತೇವೆ ಎನ್ನುವುದು ತುಂಬಾ ಮುಖ್ಯ. ಆಗ ಕಮ್ಮಟ ಯಶಸ್ವಿಯಾಗಲಿಕ್ಕೆ ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್.ಅಶೋಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವಿಷ್ಯತ್ತಿನ ಮಕ್ಕಳನ್ನು ಈ ನಾಡಿಗೆ ಗಟ್ಟಿಗೊಳಿಸುವಂಥ, ಈ ಮಣ್ಣಿನ ಸಂಸ್ಕೃತಿಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಈ ಕಮ್ಮಟ ಮಾಡಲಾಗಿದೆ. ಮಕ್ಕಳು ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಬೇಕು ಎನ್ನುವ ಕಾರಣದಿಂದ ಮಕ್ಕಳ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿದೆ. ಮಕ್ಕಳಿಗಾಗಿ ಮನೆ, ಮನ ಪರಿವರ್ತನೆಯ ಕಾರ್ಯಗಳಾಗಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡೋಣ. ಮಕ್ಕಳು ಮೊಬೈಲ್ ಎಂಬ ಹುಚ್ಚು ಪೆಟ್ಟಿಗೆಯ ದಾಸರಾಗುವುದು ಬೇಡ. ನಮ್ಮ ಮಣ್ಣಿನ ಮಕ್ಕಳಿಗೆ ಮಣ್ಣಿನ ಸೊಗಡನ್ನು ತಿಳಿಸುವ, ಮಕ್ಕಳಿಗೆ ಪರಿಸರದ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಆಗಬೇಕು ಎಂದಯ ಹೇಳಿದರು.

ಮೈಸೂರಿನ ನಾಗರಾಜ್ ಮಾತನಾಡಿ, ಮಕ್ಕಳಿಂದ ಒಳ್ಳೆಯ ಫಲ ನಿರೀಕ್ಷೆ ಮಾಡಬೇಕೆಂದರೆ ದೊಡ್ಡವರು ಸರಿಯಾಗಬೇಕು. ಜಾನಪದ ಸಂಸ್ಕೃತಿ ಮಕ್ಕಳಿಗೆ ಬಿತ್ತುವ ಕೆಲಸ ಇಂತಹ ಕಮ್ಮಟಗಳಿಂದ ಆಗಬೇಕು. ನಮ್ಮ ಸಂಸ್ಕೃತಿಯಲ್ಲಿರುವ ಟಿವಿ, ಮೊಬೈಲ್‌ನ್ನು ದೂರ ಇಡುವಂತೆ ನೋಡಿಕೊಳ್ಳಬೇಕು. ಮಕ್ಕಳಿಗಿಂತ ಪೋಷಕರು ಕೆಟ್ಟಿದ್ದಾರೆ. ಪೋಷಕರು ಜಾಗೃತರಾದರೆ ಮಕ್ಕಳು ಜಾಗೃತರಾಗುವರು ಎಂದರು.

ಮುಖ್ಯ ಅತಿಥಿಗಳಾಗಿ ಶಿಕ್ಷಕ ಅಣ್ಣಿಗೆರೆಯ ವಿರೂಪಾಕ್ಷಪ್ಪ, ಹಾಸನ ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ನವಿಲೆ ಪರಮೇಶ್ ಮಾತನಾಡಿದರು. ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನಾಡಿದರು. ಪ್ರಾಸ್ತಾವಿಕವಾಗಿ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯಧ್ಯಕ್ಷ ಸಿದ್ದೇಶ ಮಾತನಾಡಿದರು. ಮಹಾದೇವ ಸ್ವಾಗತಿಸಿದರೆ ನೀಲಾ ನಾಗೇಶ್ ನಿರೂಪಿಸಿದರು. ಸಂಪತ್ತು ವಂದಿಸಿದರು. ವೇದಿಕೆಯ ಮೇಲೆ ಸಿ ಎಲ್ ಮಹಾದೇವ ಡಾ. ಯೋಗೀಶ್, ಸಿ ಎಸ್ ಮನೋಹರ್, ಸಚಿನ್, ಕಲ್ಕೆರೆಯ ಸೃಷ್ಟಿ, ಮಲ್ಲಿಗೆ ಸುಧೀರ್, ಸಂಜೀವ ದುಮುಕನಾಳ್, ಅರುಣಾ ನಾಗೇಂದ್ರ, ಸೈಯದ್ ಹಾಗೂ ಮತ್ತಿತರರಿದ್ದರು.

Share this article