ಮಕ್ಕಳಿಗಾಗಿ ಸಾಧ್ಯವಾದಷ್ಟು ಸಮಯ ಮೀಸಲಿಡಿ: ನೆಗಳೂರ ಶ್ರೀ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

ಮಕ್ಕಳು ಕುಂಬಾರನ ಕೈಯಲ್ಲಿರುವ ಜೇಡಿ ಮಣ್ಣು ಇದ್ದಂತೆ. ಶಿಕ್ಷಕರು ಶಾಲೆ ಯಾವ ರೂಪ ಕೊಡುತ್ತಾರೋ ಹಾಗೆ ಅವರು ಬೆಳೆಯುತ್ತಾರೆ ಎಂದು ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ತಿಳಿಸಿದರು.

ಹಾವೇರಿ: ಮಕ್ಕಳಿಗಾಗಿ ಪ್ರತಿ ದಿನ ಪಾಲಕರು ಸಾಧ್ಯವಾದಷ್ಟು ಸಮಯ ಮೀಸಲಿಡಿ. ಅವರ ಚಟುವಟಿಕೆ, ಆಸಕ್ತಿ ಗಮನಿಸಿ ಪ್ರೋತ್ಸಾಹಿಸಿ ಎಂದು ಪಾಲಕರಿಗೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ತಾಲೂಕಿನ ದೇವಗಿರಿಯ ಪಿಬಿ ರಸ್ತೆಯಲ್ಲಿರುವ ಕನಕ ಲೋಕ ಶಿಕ್ಷಣ (ಕೆಎಲ್‌ಎಸ್) ಟ್ರಸ್ಟ್‌ನ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾತೃದೇವೋಭವ ಪಿತೃದೇವೋಭವ ಹೆಸರಿನಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಿಎಂಐಪಿ ಶಾಲೆಯಲ್ಲಿ ಪಾಲಕರು ಮಕ್ಕಳಿಂದ ಪಾದಪೂಜೆ ಮಾಡಿಸಿಕೊಂಡು ಧನ್ಯರಾಗಿದ್ದಾರೆ. ತಂದೆ ತಾಯಿಗಳಿಗೆ ಮಕ್ಕಳು ಸಮರ್ಪಣೆ ಮಾಡಿಕೊಂಡಿದ್ದಾರೆ. ಇಂತಹ ಸಮರ್ಪಣಾ ಭಾವ ಮೂಡಿಸಿದ ಶಾಲೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಕ್ಕಳು ಯೋಗ್ಯರಾದರೆ ಆಸ್ತಿಯ ಅವಶ್ಯಕತೆ ಅವರಿಗಿಲ್ಲ. ಅಯೋಗ್ಯರಾದ ಮಕ್ಕಳಿಗೆ ಎಷ್ಟು ಆಸ್ತಿ ಇದ್ದರೂ ಸಾಲುವುದಿಲ್ಲ. ಮಕ್ಕಳಿಗೆ ಸಂಸ್ಕಾರ ಕೊಡಿ ಎಂದರು.

ಮಕ್ಕಳು ಕುಂಬಾರನ ಕೈಯಲ್ಲಿರುವ ಜೇಡಿ ಮಣ್ಣು ಇದ್ದಂತೆ. ಶಿಕ್ಷಕರು ಶಾಲೆ ಯಾವ ರೂಪ ಕೊಡುತ್ತಾರೋ ಹಾಗೆ ಅವರು ಬೆಳೆಯುತ್ತಾರೆ. ಶಾಲೆಯ ಮಕ್ಕಳ ಬೆಳವಣಿಗೆಗಾಗಿ ಇಂತಹ ಹತ್ತಾರು ವಿಶೇಷ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲೇ ಮೆಲ್ದರ್ಜೆಯಲ್ಲಿರುವ ಶಾಲೆಯಾಗಿದೆ ಎಂದರು.

ಸಂಸ್ಥೆಯ ಚೇರ್ಮನ್ ಪ್ರೊ.ಎಂ.ನಾಗರಾಜ ಮಾತನಾಡಿ, ಮಕ್ಕಳಿಗೆ ವಿಶೇಷ ಸಂಸ್ಕಾರ ಕೊಡುವ ಕನಸು ಇತ್ತು. ಆ ಕನಸು ಸಾಕಾರ ಮಾಡುವ ನಿಟ್ಟಿನಲ್ಲಿ ನಮ್ಮ ತಾಯಿ ಬಸಮ್ಮ ಹಾಗೂ ತಂದೆ ಎಂ.ಮರಿಯಪ್ಪ ಅವರ 12ನೇ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ನೆನಪಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಮನೆ ದಾಸೋಹದ ಮನೆಯಾಗಿತ್ತು. ನಮ್ಮ ಪಾಲಕರು ನಿರಕ್ಷರಸ್ಥರಾಗಿದ್ದರೂ ನನ್ನ ಓದಿಗಾಗಿ ತಾಳಿ ಅಡ ಇಡಲು ತಾಯಿ ಮುಂದಾಗಿದ್ದರು. ಅವರ ಶಿಕ್ಷಣದ ಪರಂಪರೆ ಮುಂದುವರಿಸಬೇಕು ಎಂದು ಶಾಲೆಯ ಶಿಕ್ಷಕೇತರ ಸಿಬ್ಬಂದಿ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡಿದ್ದೇವೆ. ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲ ಸಿಬ್ಬಂದಿಯ ಪಾತ್ರವಿದೆ. ಮುಂದಿನ ದಿನಗಳಲ್ಲಿ ಇನ್ನು ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೈನ ಸಮುದಾಯದವರು 2008ರಲ್ಲಿ ಇಲ್ಲಿನ ಖಾಲಿ ಜಾಗದಲ್ಲಿ ದೊಡ್ಡ ಟೆಂಟ್ ಹಾಕಿದ್ದರು. ಇಲ್ಲಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭವಾಗುತ್ತದೆ ಎಂದು ಜೈನ ತಪಸ್ವಿಗಳು ಆಶೀರ್ವಾದ ಮಾಡಿದ್ದರು. 2021ರಲ್ಲಿ ಬಸಮ್ಮ ಹಾಗೂ ಮರಿಯಪ್ಪನವರ ಕನಸು ಈ ಶಾಲೆ. ಆ ಕನಸು ನನಸಾಗಿ ಮೂರು ವರ್ಷ ಗತಿಸಿದೆ. ಈ ನೆನಪಿಗೆ ಸಂಸ್ಥಾಪಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಗಾಯಕಿ ಸೌಮ್ಯ ಕೆಂಪಣ್ಣವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಕ್ಕಳು ಕುಣಿದು ಸಂಭ್ರಮಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಧರ್ಮದರ್ಶಿಗಳಾ ಎಂ.ಆರ್.ಪೂಜಾರ, ಚಿಕ್ಕಯ್ಯ, ಸಿ.ಚನ್ನೇಗೌಡ, ರಾಜಶೇಖರ ಪಾಟೀಲ, ರಜನಿ ಕಲಕೋಟಿ, ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಗಣೇಶ ಎಂ. ಸ್ವಾಗತಿಸಿದರು. ಮಮತಾ ಕಟಪಟ್ಟಿ ಹಾಗೂ ಮಂಜುನಾಥ ಹರಿಜನ ನಿರೂಪಿಸಿದರು.

ಮಕ್ಕಳಿಂದ ಹೆತ್ತವರ ಪಾದಪೂಜೆ

ಶಾಲೆಯಲ್ಲಿ ಬೆಳಗ್ಗೆ ಮೇದ ದಕ್ಷಿಣ ಮೂರ್ತಿ ಪೂಜೆ ಹಾಗೂ ಹೋಮ ಜರುಗಿತು. ನಂತರ ಶಾಲೆಯ ಮಕ್ಕಳು ಅವರ ಪಾಲಕರಿಗೆ ಪಾದಪೂಜೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು. ಶ್ರೀಗಳು ಪಾಲಕರು- ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬೋಧಕೇತರ ಸಿಬ್ಬಂದಿಗೆ ಉಡುಗೊರೆ ನೀಡಲಾಯಿತು.

Share this article