ಶಿವಮೊಗ್ಗ : ನಮ್ಮ ದೇಶದಲ್ಲಿ ಬಹು ಸಂಖ್ಯೆಯ ಅನಕ್ಷರಸ್ಥ ಹಾಗೂ ಕಡಿಮೆ ಶಿಕ್ಷಣ ಹೊಂದಿದವರಿದ್ದಾರೆ. ಇವರಿಗೆ ತಾವು ಪಡೆದ ಶಿಕ್ಷಣದಿಂದ ನೀಡುವ ಅಮೂಲ್ಯ ಸೇವೆ ವಿಶಿಷ್ಟ ಬದಲಾವಣೆಯನ್ನು ತರುತ್ತದೆ ಎಂದು ಹೈದ್ರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ರಾಮ್ ರಾಮಸ್ವಾಮಿ ಹೇಳಿದರು.
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳ ವೈಚಾರಿಕ ಚರ್ಚೆಗೆ, ಸೃಜನಶೀಲ ಚಿಂತನೆಗೆ, ಅನ್ವೇಷಣೆಗೆ, ಹೊಸತನ ಅಭ್ಯುದಯಕ್ಕೆ ಮತ್ತು ಆವಿಷ್ಕಾರಕ್ಕೆ ವಿಶ್ವವಿದ್ಯಾಲಯ ಪೂರಕ ವಾತಾವರಣ ನಿರ್ಮಿಸಲಿದೆ. ಅಲ್ಲದೇ ನಮ್ಮ ಸಮಾಜ ಮತ್ತು ಸಂಸ್ಕೃತಿಯಲ್ಲಿರುವ, ನಮ್ಮಲ್ಲಿನ ಆಸಕ್ತಿಯನ್ನು ಪ್ರೇರೇಪಿಸುವ, ನಮ್ಮ ಜೀವನವನ್ನು ಉತ್ತಮಗೊಳಿಸುವ ಮಾಹಿತಿಯನ್ನು ಸಂಗ್ರಹಿಸುವ ಸ್ಥಳವಾಗಲಿದೆ ಎಂದರು.ನೀವು ಪಡೆದ ಪದವಿ, ಶಿಕ್ಷಣ ನಿಮ್ಮ ವೈಯಕ್ತಿಕ ಒಳಿತಿಗಾಗಿ ಜೊತೆಗೆ ಒಂದಷ್ಟು ಸಾರ್ವಜನಿಕ ಸೇವೆಗೆ ಮುಡಿಪಾಗಿಡುವಂತೆ ಅವರು ಮನವಿ ಮಾಡಿದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ, ವಿದ್ಯಾರ್ಥಿಗಳು ಗಳಿಸಿದ ಜ್ಞಾನವನ್ನು ತಮ್ಮ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಸಮಾಜ, ದೇಶ ಮತ್ತು ಪರಿಸರದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.ಘಟಿಕೋತ್ಸವ ಸಮಾರಂಭವು ವಿದ್ಯಾರ್ಥಿಗಳ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಇದು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಆಚರಣೆ ಮಾತ್ರವಲ್ಲ, ಇದು ನಿಮ್ಮ ಕನಸುಗಳ ಹಾರಾಟದ ಆರಂಭವಾಗಿದೆ. ಈ ಘಟಿಕೋತ್ಸವವು ಶಿಕ್ಷಣದ ಹಾದಿಯಿಂದ ಅನುಭವ ಮತ್ತು ಕ್ರಿಯೆಯ ಹಾದಿಗೆ ಹೆಜ್ಜೆ ಹಾಕಲಿದ್ದೀರಿ ಎಂಬ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.ಘಟಿಕೋತ್ಸವದಲ್ಲಿ ಸಮಾಜ ಕಲ್ಯಾಣ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶ್ರಮಿಸಿದ ಪ್ರೊಫೆಸರ್ ಸಿ.ಎಸ್.ಉನ್ನಿಕೃಷ್ಣನ್, ಡಿ.ನಾಗರಾಜ್, ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಸಂತಸದ ವಿಷಯ. ಸಮಾಜಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದರು.ಸಮಾರಂಭದಲ್ಲಿ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಹಾಗೂ ಸಿಂಡಿಕೇಟ್ ಸದಸ್ಯರು, ಕುವೆಂಪು ವಿವಿ ಅಧಿಕಾರಿಗಳು ಉಪಸ್ಥಿತರಿದ್ದರು.ಘಟಿಕೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬುಧವಾರ 34ನೇ ವರ್ಷದ ಘಟಿಕೋತ್ಸವ ಸಂಭ್ರಮದಿಂದ ನೆರವೇರಿತು. ವಿಶ್ವವಿದ್ಯಾನಿಲಯ ಆವರಣದ ಬಸವ ಭವನದಲ್ಲಿ ಬುಧವಾರ ನಡೆದ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮೊದಲು ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಅಂತಾರಾಷ್ಟ್ರೀಯ ಯೋಗ ಪಟು ಮತ್ತು ಯೋಗ ಶಿಕ್ಷಕ ಡಿ.ನಾಗರಾಜ್ ಹಾಗೂ ದೇಶದ ಶ್ರೇಷ್ಠ ಭೌತಶಾಸ್ತ್ರ ವಿಜ್ಞಾನಿ ಪ್ರೊ.ಸಿ.ಎಸ್ ಉನ್ನಿಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ನಂತರ ಎಂ.ಎ ಸ್ನಾತಕೋತ್ತರ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 146 ಸ್ವರ್ಣ ಪದಕಗಳಿದ್ದು, ಇವುಗಳಲ್ಲಿ 13 ಪುರುಷರು ಹಾಗೂ 71 ಮಹಿಳೆಯರು ಸೇರಿ ಒಟ್ಟು 84 ವಿದ್ಯಾರ್ಥಿಗಳು ಹಂಚಿಕೊಂಡರು. 17 ನಗದು ಬಹುಮಾನಗಳ ಪೈಕಿ ಒಬ್ಬ ಪುರುಷ ಹಾಗೂ 13 ಮಹಿಳೆಯರು ಸೇರಿ 14 ವಿದ್ಯಾರ್ಥಿಗಳು ಹಂಚಿಕೊಂಡರು.ಪದವಿ ಪ್ರದಾನ:ಕುವೆಂಪು ವಿವಿ ಘಟಿಕೋತ್ಸವದಲ್ಲಿ 6872 ಪುರುಷರು ಹಾಗೂ 12013 ಮಹಿಳೆಯರು ಸೇರಿ ಒಟ್ಟು 18885 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.115 ಪುರುಷರು ಹಾಗೂ 89 ಮಹಿಳೆಯರು ಸೇರಿ 204 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.ವಿದ್ಯಾರ್ಥಿಗಳ ಚಿನ್ನದ ಬೆಳೆ:ಕನ್ನಡ ಭಾರತಿ ವಿಭಾಗದ ಎಂ.ಎ ವಿದ್ಯಾರ್ಥಿ ವಸಂತ್ ಕುಮಾರ್ ಒಟ್ಟು 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯುವ ಮೂಲಕ ಘಟಿಕೋತ್ಸವದಲ್ಲೇ ಅತೀ ಹೆಚ್ಚು ಪದಕ ಪಡೆದರೆ ಎಂಎಸ್ಸಿ( ಪರಿಸರ ವಿಜ್ಞಾನ) ಯಲ್ಲಿ ಸಾನಿಯಾ ಫಿರ್ದೋಸ್ ಅವರು 6 ಸ್ವರ್ಣ ಪದಕ ಪಡೆದುಕೊಂಡರು. ಎಂ.ಎ ಸಮಾಜಶಾಸ್ತ್ರ ವಿಭಾಗದ ಎ.ಎಸ್.ರಕ್ಷೀತಾ , ಎಂಬಿಎ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದ ಎಸ್.ರಕ್ಷೀತ್, ಎಂಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದ ಎಸ್.ಶುಭಶ್ರೀ ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಜಿ.ಹರ್ಷಿತಾ ಅವರು ತಲಾ 5 ಸ್ವರ್ಣ ಪದಕ ಪಡೆದುಕೊಂಡರು.
ಎಂಎಸ್ಸಿ ಗಣಿತ ಶಾಸ್ತ್ರ ವಿಭಾಗದ ವಂದನಾ ಎ.ಶೆಟ್ಟಿ 4 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ, ಎಂ.ಎ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗದ ಸಂಗೀತಾ ಬಿ.ಕೆ, ಎಂ.ಎಸ್ಸಿ ರಸಾಯನ ಶಾಸ್ತ್ರ ಆರ್.ಅರ್ಪಿತಾ , ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಡಿ.ಎಂ.ಧನುರ್ವಿ ತಲಾ 4 ಸ್ವರ್ಣ ಪದಕ ಪಡೆದುಕೊಂಡರು.ಎಂ.ಎ ಉರ್ದು ವಿಭಾಗದಲ್ಲಿ ಗುಲ್‌ನಾಜ್ 3 ಸ್ವರ್ಣ ಪದಕ ಮತ್ತು 1 ನಗದು ಹಾಗೂ ಎಂ.ಎ ಇಂಗ್ಲಿಷ್ ವಿಭಾಗದಲ್ಲಿ ಯೋಷಿತಾ ಎಸ್.ಸೊನಾಲೆ, ಎಂ.ಎ ರಾಜ್ಯಶಾಸ್ತ್ರದಲ್ಲಿ ಬಿ.ಆರ್. ವನಿತಾ , ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಕೆ.ಟಿ.ಸಿಂಧು , ಎಂ.ಕಾಂನಲ್ಲಿ ಬಿ.ಆರ್.ಪೂರ್ಣ ಪ್ರಜ್ಞಾ , ಎಂಎಸ್ಸಿ ಔದ್ಯೋಗಿಕ ರಸಾಯನ ಶಾಸ್ತ್ರದಲ್ಲಿ ಎ.ಆರ್.ರಂಜಿತಾ, ಎಂಎಸ್ಸಿ ಪ್ರಾಣಿಶಾಸ್ತ್ರದಲ್ಲಿ ಕೆ.ವೈ.ಧನ್ಯಾ, ಎ.ಸಿ.ಎ ವಿಭಾಗದಲ್ಲಿ ಅಶ್ವಥ ಬಿ.ಬೈತಾನಾಲ್ ಇವರು ತಲಾ 3 ಸ್ವರ್ಣ ಪದಕ ಪಡೆದುಕೊಂಡರು.6 ಚಿನ್ನದ ಪದಕ ಬಂದಿರುವುದು ಖುಷಿ ಹೆಚ್ಚಿಸಿದೆಶಿವಮೊಗ್ಗ: ನಾನೆಂದೂ ಪದಕವನ್ನು ನಿರೀಕ್ಷೆ ಮಾಡಿದವಳಲ್ಲ. ನನಗೆ ಡಿಗ್ರಿಯಲ್ಲೂ ಶೇ.90ಕ್ಕಿಂತ ಹೆಚ್ಚು ಅಂಕ ಬಂದಿತ್ತು. ಎಂಎಸ್ಸಿ ಮೊದಲ ಸೆಮಿಸ್ಟರ್‌ನಲ್ಲಿ ನಾನು ಸೆಕೆಂಡ್ ರ್ಯಾಂಕ್ ಪಡೆದಿದ್ದೆ. ಆಗ ನನಗೆ ನಾನು ರ್ಯಾಂಕ್ ಪಡೆಯಬಹುದು ಎಂಬ ಆತ್ಮವಿಶ್ವಾಸ ಹೆಚ್ಚಿಸಿತು. ತರಗತಿ ಆರಂಭದಿಂದಲೇ ನಾನು ಅಭ್ಯಾಸ ಮಾಡುತ್ತಿದ್ದೆ. ಮನೆಯವರ ಪ್ರೋತ್ಸಾಹ, ಪ್ರಾಧ್ಯಾಪಕರ ಸಹಕಾರದಿಂದ ನಾನು ಇಂದು ಚಿನ್ನದ ಪದಕ ಪಡೆದಿದ್ದೇನೆ. ನನಗೆ 6 ಚಿನ್ನದ ಪದಕ ಬಂದಿರುವುದು ಖುಷಿಯನ್ನು ಹಿಮ್ಮಡಿಗೊಳಿಸಿದೆ ಎಂದು 6 ಚಿನ್ನದ ಪದಕ ಪಡೆದ ಎಂಎಸ್ಸಿ( ಪರಸರ ವಿಜ್ಞಾನ) ವಿದ್ಯಾರ್ಥಿನಿ ಸಾನಿಯಾ ಫಿರ್ದೋಸ್ ಅಭಿಪ್ರಾಯಪಟ್ಟರು. ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಹಿರಿಯ ಮುತ್ಸದ್ಧಿ ಹಾಗೂ ವಿಧಾನ ಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಂಬೈನ ವಿಜ್ಞಾನಿ ಸಿ.ಎಸ್.ಉನ್ನಿಕೃಷ್ಣನ್ ಮತ್ತು ಭದ್ರಾವತಿಯ ಯೋಗ ಗುರು ನಾಗರಾಜ್ ಅವರಿಗೆ ವಿಶ್ವ ವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶರತ್ ಅನಂತ್ ಮೂರ್ತಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.