ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲೆಯಲ್ಲಿ ಕಾವೇರಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಬೈಕ್ ರ್‍ಯಾಲಿಯೊಂದಿಗೆ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಅವರು ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ, ಶಿಸ್ತು, ದೃಢತೆ ಮೂಲಕ ಗುರಿ ಸಾಧಿಸಲು ಸಾಧ್ಯ ಎಂದ ಅವರು, ಸ್ವಾಮಿ ವಿವೇಕಾನಂದರ ಕೆಲವು ದೃಷ್ಟಾಂತಗಳನ್ನು ನೆನಪಿಸಿದರು.ಹಣದ ವ್ಯಾಮೋಹ ಮರೆತು ತಮ್ಮ ಉದ್ದೇಶಗಳ ಈಡೇರಿಕೆಗೆ ಸದಾ ಚಟುವಟಿಕೆಯಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಏಕಾಗ್ರತೆಯ ಕೊರತೆ ಎದ್ದು ಕಾಣುತ್ತಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಮನೋಬಲವನ್ನು ಕನಿಷ್ಠ ಅವಧಿ ಕೂಡ ಹಿಡಿದಿಟ್ಟುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕನಿಷ್ಠ ಕೆಲವೇ ಸೆಕೆಂಡುಗಳಷ್ಟು ಅವಧಿಯ ಏಕಾಗ್ರತೆ ಹೊಂದುವ ಮನಸ್ಥಿತಿ ಮಕ್ಕಳಲ್ಲಿ ಇಲ್ಲದಂತಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ವಿಶ್ವದಲ್ಲಿಯೇ ಅಪರೂಪವಾದ ಸಂಸ್ಕೃತಿ ನಮ್ಮ ದೇಶದಲ್ಲಿದ್ದು ಅದನ್ನು ನಶಿಸಿ ಹೋಗದಂತೆ ಎಚ್ಚರ ಅಗತ್ಯ ಎಂದರು.
ಕುಶಾಲನಗರ ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ವಿವೇಕಾನಂದ ಕಾಲೇಜು ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.