ಮಾವಿನಕಟ್ಟೆ ಶಾಲೆ ಮಕ್ಕಳಿಗೆ ದೆಹಲಿ ತೋರಿಸಿದ ಸಂಸದೆ

KannadaprabhaNewsNetwork | Published : Dec 30, 2024 1:00 AM

ಸಾರಾಂಶ

ರಾಷ್ಟ್ರೀಯ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಚನ್ನಗಿರಿ ಕ್ಷೇತ್ರದ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ ನಿಧನದಿಂದಾಗಿ ಸ್ಪರ್ಧೆ ರದ್ದಾಯಿತು. ಈ ಹಿನ್ನೆಲೆ ನಿರಾಶರಾಗಿದ್ದ ಮಕ್ಕಳಿಗೆ ದೆಹಲಿ ದರ್ಶನ ಭಾಗ್ಯ ಲಭ್ಯವಾಗಿದ್ದು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದೆಹಲಿ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟು ಮಾತೃಹೃದಯ ಮೆರೆದಿದ್ದಾರೆ.

- ವಿಜ್ಞಾನ ನಾಟಕ ಸ್ಪರ್ಧೆ ರದ್ದು ತಿಳಿದು ಪ್ರವಾಸ ಭಾಗ್ಯ ಕಲ್ಪಿಸಿದ ಸಂಸದೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಚನ್ನಗಿರಿ ಕ್ಷೇತ್ರದ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ ನಿಧನದಿಂದಾಗಿ ಸ್ಪರ್ಧೆ ರದ್ದಾಯಿತು. ಈ ಹಿನ್ನೆಲೆ ನಿರಾಶರಾಗಿದ್ದ ಮಕ್ಕಳಿಗೆ ದೆಹಲಿ ದರ್ಶನ ಭಾಗ್ಯ ಲಭ್ಯವಾಗಿದ್ದು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದೆಹಲಿ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟು ಮಾತೃಹೃದಯ ಮೆರೆದಿದ್ದಾರೆ.

ಡಾ. ಮನಮೋಹನ ಸಿಂಗ್‌ರ ನಿಧನದ ಹಿನ್ನೆಲೆ ಸ್ಪರ್ಧೆ ರದ್ದುಗೊಂಡ ವಿಷಯ ತಿಳಿದ ಸಂಸದೆ ಡಾ.ಪ್ರಭಾ ಅವರು, ತಮ್ಮ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಶಾಲೆ ಮಕ್ಕಳಿಗೆ ಲೋಕಸಭೆ ವೀಕ್ಷಿಸಲು ಅವಕಾಶ ಮಾಡಿಸಿಕೊಟ್ಟರು. ಅಷ್ಟೇ ಅಲ್ಲದೇ, ಭಾನುವಾರ ಆ ಎಲ್ಲ ಮಕ್ಕಳಿಗೂ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಲು ವೈಯಕ್ತಿಕವಾಗಿ ಸಹಾಯ ಮಾಡುವ ಮೂಲಕ ಸ್ಪಂದಿಸಿದರು.

8-9 ಮಕ್ಕಳು, ಆರೇಳು ಶಿಕ್ಷಕ, ಶಿಕ್ಷಕಿಯರು ಇಡೀ ದಿನ ದೆಹಲಿಯ ಕೋಟೆಗಳು, ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದರು. ಇದರಿಂದ ಮಕ್ಕಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು. ಟೀವಿ, ಸಿನಿಮಾ, ಪತ್ರಿಕೆಗಳಲ್ಲಿ ನೋಡುತ್ತಿದ್ದ, ಓದುತ್ತಿದ್ದ ದೆಹಲಿಯಲ್ಲಿ ತಾವು ಸುತ್ತಾಡುತ್ತಿರುವುದು, ನೋಡುತ್ತಿರುವುದನ್ನು ಮನವರಿಕೆ ಮಾಡಿಕೊಂಡು, ಗ್ರಾಮೀಣ ಮಕ್ಕಳು ದೆಹಲಿ ಪ್ರವಾಸ ಭಾಗ್ಯದ ಪ್ರತಿಕ್ಷಣ ಆಸ್ವಾದಿಸಿದರು.

ತಮ್ಮ ಹೆತ್ತವರು, ಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರಿಗೂ ಕರೆ ಮಾಡಿ, ಸಂಸದರು ತಮಗೆ ಸಂಸತ್ ಭವನ, ದೆಹಲಿ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದನ್ನು ಸಂಭ್ರಮದಿಂದ ಹೇಳಿಕೊಂಡರು. ಸಂಸದೆ ಡಾ.ಪ್ರಭಾ ಕಾಳಜಿ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತೊಂದು ಕಡೆ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾವಿನಕಟ್ಟೆ ಶಾಲೆ ಮಕ್ಕಳಿಗೆ ದೆಹಲಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಸದೆ ಡಾ.ಪ್ರಭಾ ಧನ್ಯವಾದ ಅರ್ಪಿಸಿದ್ದಾರೆ.

- - -

-29ಕೆಡಿವಿಜಿ8, 9:

ದೆಹಲಿಯಲ್ಲಿ ಪ್ರವಾಸ ಖುಷಿ ಅನುಭವಿಸಿದ ಚನ್ನಗಿರಿ ತಾಲೂಕು ಮಾವಿನಕಟ್ಟೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು.

Share this article