ಕನ್ನಡಪ್ರಭ ವಾರ್ತೆ ಮಡಿಕೇರಿ
ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್ ಹಬ್ಬವನ್ನು ಕೊಡಗು ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿ ಸಂಭ್ರಮ ಸಡಗರದಿಂದ ಬುಧವಾರ ಆಚರಿಸಿದರು.ಜಿಲ್ಲೆಯಾದ್ಯಂತ ಇರುವ ಎಲ್ಲ ಚರ್ಚ್‌ಗಳಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು. ಹೊಸ ಬಟ್ಟೆ ತೊಟ್ಟ ಮಕ್ಕಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಇಡೀ ದಿನ ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ನಗರದ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಶಾಂತಿ ಚರ್ಚ್‌ನಲ್ಲಿ ಹಾಗೂ ಸಂತ ಮೈಕಲರ ಚರ್ಚ್‌ಗಳಲ್ಲಿ ವಿಶೇಷ ಆರಾಧನೆಗಳು ನಡೆದವು. ಸಂತ ಮೈಕಲರ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ಧರ್ಮಗುರು ಜಾರ್ಜ್ ದೀಪಕ್ ಅವರು ಬಾಲ ಏಸುವಿನ ಪ್ರತಿಕೃತಿಯನ್ನು ಗೋದಲಿಯಲ್ಲಿರಿಸಿದರು. ಬಳಿಕ ಏಸುವಿನ ಸಂದೇಶವನ್ನು ಸಾರಿದರು. ಅತ್ತ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಶಾಂತಿ ಚರ್ಚ್‌ನಲ್ಲಿ ಧರ್ಮಗುರು ಫಾದರ್ ಜೈಸನ್ ಗೌಡರ್ ಧರ್ಮಸಂದೇಶವನ್ನು ನೀಡಿದರು.ಬುಧವಾರ ಬೆಳಗ್ಗೆಯಿಂದಲೇ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಚರ್ಚ್‌ಗಳಿಗೆ ಭೇಟಿ ನೀಡಿದ ಕ್ರೈಸ್ತ ಬಾಂಧವರು ಭಕ್ತಿಭಾವ ಮೆರೆದರು. ಧರ್ಮಗುರುಗಳು ಶಾಂತಿಯ ಸಂದೇಶದ ಮಾತುಗಳನ್ನಾಡಿದರು.
ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರ, ಶನಿವಾರಸಂತೆ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿಯೂ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು ನಡೆದವು. ದನದ ಕೊಟ್ಟಿಗೆಯಲ್ಲಿ ಜನಿಸಿದ ಸಂಕೇತವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಗೋದಲಿಯನ್ನು ನಿರ್ಮಿಸಿ ಅದರಲ್ಲಿ ಬಾಲ ಏಸುವಿನ ಮೂರ್ತಿ ಮಲಗಿಸಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಕೇಕ್ ಹಂಚಿ ಸಂಭ್ರಮಿಸಿದರು.ಹಬ್ಬದ ಪ್ರಯುಕ್ತ ಮನೆಗಳನ್ನು ವಿದ್ಯುತ್ ದೀಪಾಲಂಕಾರ ಮಾಡಿ, ನಕ್ಷತ್ರ ದೀಪ ತೂಗು ಹಾಕಿ ಸಿಂಗರಿಸಲಾಗಿತ್ತು. ನಗರದ ಬೇಕರಿಗಳಲ್ಲಿ ಕೇಕ್‌ಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಬಹುತೇಕ ಎಲ್ಲ ಬೇಕರಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಬಗೆಯ ಕೇಕ್‌ಗಳನ್ನು ತಯಾರಿಸಲಾಗಿತ್ತು.