ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ಆವರಣದಲ್ಲಿ ನಡೆದ ಶ್ರೀಶಿವಬಸವ ಸ್ವಾಮೀಜಿಗಳ ಜನ್ಮ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಠವು ಅಪಾರ ಭಕ್ತರನ್ನು ಹೊಂದಿದೆ. ಕೆ.ಆರ್.ಪೇಟೆಯಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿದೆ. ನಮ್ಮ ತಾಲೂಕಿನಲ್ಲಿ ನಡೆಯುವ ಪ್ರತಿ ಹಬ್ಬ ಹರಿದಿನ, ದೇವರ ಉತ್ಸವಗಳು ಶ್ರೀಮಠದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿಯೇ ನಡೆಸುವ ಸಂಪ್ರಾಯವಿದೆ. ಮುಂದಿನ ದಿನಗಳಲ್ಲಿ ಮಠವು ಮತ್ತಷ್ಟು ಉನ್ನತಮಟ್ಟಕ್ಕೆ ಬೆಳೆಯಲಿ ಎಂದರು.
ಶ್ರೀಶಿವಬಸವ ಸ್ವಾಮೀಜಿ ಮಾತನಾಡಿ, ಮಠದ ಭಕ್ತರು, ಯುವಕರು ಸೇರಿ ಹುಟ್ಟಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ಭಾಗದ ಜನತೆ ಮಠ ಹಾಗೂ ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಅದರಂತೆ ಮಠದ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಮಾತನಾಡಿ, ಶ್ರೀಶಿವಬಸವ ಸ್ವಾಮೀಜಿ ಅವರು ಸಣ್ಣ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ. ಆದಿಚುಂಚನಗಿರಿ ಮಠವನ್ನು ಬಾಲಗಂಗಾದರನಾಥ ಸ್ವಾಮೀಜಿಗಳು ಬಹು ಎತ್ತರಕ್ಕೆ ಬೆಳೆಸಿದರು. ಅದೇ ರೀತಿ ಸಿದ್ಧಗಂಗೆ, ಸುತ್ತೂರು ಮಠಗಳು ಸಹ ಪ್ರಸಿದ್ಧಿ ಪಡೆದುಕೊಂಡಿವೆ. ಅದೇ ರೀತಿ ಬೇಬಿ ಬೆಟ್ಟದ ಶ್ರೀರಾಮಯೋಗೇಶ್ವರ ಮಠವು ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಚಿತ್ರನಟ ಕೆ.ಆರ್.ಪೇಟೆ ಶಿವರಾಜು ಮಾತನಾಡಿ, ಮನುಷ್ಯರಲ್ಲಿ ಮನುಷ್ಯತ್ವ ಗುಣಗಳೇ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಮಠಗಳು ಜನರಲ್ಲಿ ಮನುಷ್ಯತ್ವದ ಗುಣಗಳು ಬೆಳೆಸುವ ಕೆಲಸ ಮಾಡುತ್ತಿವೆ. ಅದೇ ಸಾಲಿನಲ್ಲಿ ಬೇಬಿಬೆಟ್ಟದ ಮಠವು ಸಹ ನಡೆಯುತ್ತಿದೆ. ಮಠವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ನಾಡಿನ ಸಣ್ಣಸಣ್ಣ ಮಠಗಳಿಗೆ ನೆರವು ನೀಡುವ ಕೆಲಸ ಮಾಡಲಿ ಎಂದು ಹಾರೈಸಿದರು.
ಜೀವಧಾರೆ ಟ್ರಸ್ಟ್, ಚಾಮರಾಜನಗರದ ಬಸವರಾಜೇಂದ್ರ ಮೆಡಿಕಲ್ ಹಾಗೂ ಸ್ಪಂದನ ಕಣ್ಣಿನ ಆಸ್ಪತ್ರೆ ಮೈಸೂರು ಆಶ್ರಯದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಮಠದ ಶ್ರೀಗಳು ಶಿಬಿರಕ್ಕೆ ಚಾಲನೆ ನೀಡಿದರು. ಮಠದ ಭಕ್ತರು ಹಾಗೂ ಸುತ್ತಮುಲ್ಲಿನ ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಸಮಾರಂಭದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಯಗಚಗುಪ್ಪೆ ಕೆಇಬಿ ಬಸವರಾಜು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಚಿತ್ರನಟ ಚೇತನ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಹಿಳಾಧ್ಯಕ್ಷೆ ರೂಪ ನಿತೀನ್, ರೈತ ಮುಖಂಡ ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ್, ಆರ್.ಎ.ನಾಗಣ್ಣ, ಮಂಜುನಾಥ್, ಜಗದೀಶ್, ಶಂಕರ ನಂಜಪ್ಪ ಕಾಯಕ ಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.