ಶಿರಸಿ:
ಜಿಲ್ಲೆಯಲ್ಲದೆ ಬೆಂಗಳೂರು, ಮುಂಬೈ, ದೆಹಲಿ, ಮಂಗಳೂರು, ಬೆಳಗಾವಿ, ಕಂಚಿ ಪ್ರಾಂತದಿಂದಲೂ ಭಕ್ತರು ಆಗಮಿಸಿ ಸಂಭ್ರಮದ ಕಳೆ ಹೆಚ್ಚಿಸುತ್ತಿದ್ದಾರೆ. ಮಾತೆಯರು ಇಡೀ ದಿನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದೇ ನೂರಾರು ಕಿಲೋಮೀಟರ್ ದೂರದಿಂದ ಮುಂಜಾನೆಯೇ ಮಠಕ್ಕೆ ಆಗಮಿಸಿದ್ದಾರೆ. ಮಾತೃ ಭೋಜನ ವಿಶೇಷ:ಬುಧವಾರ ಆಗಮಿಸಿದ ಆರೇಳು ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಮಾತೃ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಪುರುಷ ಸ್ವಯಂ ಸೇವಕರು ಮಾತೆಯರಿಗೆ ಅನ್ನ, ಸಾಂಬಾರ ಇತ್ಯಾದಿ ತಂದು ಕೊಡುವ ಮೂಲಕ ಸಹಾಯ ಮಾಡಿದರು. 1500ಕ್ಕೂ ಅಧಿಕ ಮಾತೆಯರು ಪ್ರಸಾದ ಭೋಜನ ಬಡಿಸುವ ಮೂಲಕ ಅನ್ನಪೂರ್ಣೇಶ್ವರಿಯಾಗಿ ಸೇವೆ ಸಲ್ಲಿಸಿದರು.ಭವಾನಿ, ಲಲಿತಾಂಬಾ, ರಾಜೇಶ್ವರಿ, ಗಂಗಾ, ಗೌರಿ, ಸರಸ್ವತೀ ಸೇರಿದಂತೆ ಹತ್ತು ಕೌಂಟರ್‌ನಲ್ಲಿ ತಲಾ ೨೦ಕ್ಕೂ ಹೆಚ್ಚು ಮಾತೆಯರಿಂದ ಅನ್ನಯಜ್ಞ ನಡೆಯಿತು. ಮಾತೃಕಾ ಭೋಜನದಲ್ಲಿ ಗೋವೆಕಾಯಿ ಪಾಯಸ, ಕೇಸರಿ ಪ್ರಸಾದ, ಅನ್ನ, ಸಾಂಬಾರ, ಗೆಣಸಿನ ಹಸಿ, ಕ್ಯಾಬೀಜ ಪಲ್ಯ, ಅಪ್ಪೆಹುಳಿ, ಮೊಸರು ಇರುವುದು ವಿಶೇಷ. ಸಂಪೇಸರ ರಾಮಚಂದ್ರ ಜೋಶಿ ಹಾಗೂ ಆನಂದ ಭಟ್ಟ ಬಾರೆ ತಂಡ ಅತ್ಯಂತ ಶುಚಿ ಹಾಗೂ ರುಚಿಯಾದ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮಹೋತ್ಸವದಲ್ಲಿ ಅನ್ನಪ್ರಸಾದ ಸಮಿತಿ ಸದಸ್ಯರು, ಸ್ವಯಂ ಸೇವಕರು, ಮತ್ತು ಅನೇಕ ಕಾರ್ಮಿಕರು ಭಕ್ತಿ, ಶ್ರದ್ಧೆಯಿಂದ ರಾತ್ರಿ-ಹಗಲೆನ್ನದೇ ಶ್ರಮಿಸುತ್ತಿದ್ದಾರೆ. ಸಂಜೆ ಮಹಿಳೆಯರು ೧೦ ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಕಟ್ಟಿದರು.ಪರಿಸರ ಪ್ರಿಯ ವ್ಯವಸ್ಥೆ:ಮಠದಲ್ಲಿ ದಿನದಿಂದ ದಿನಕ್ಕೆ ಶಿಷ್ಯರ ಆಗಮನದ ಸಂಖ್ಯೆ ಹೆಚ್ಚುತ್ತಿದೆ. ಪರಿಸರ ಪ್ರಿಯ ಮಹೋತ್ಸವವಾಗಿ ನಡೆಸಲಾಗುತ್ತಿದೆ. ಊಟಕ್ಕೆ ಅಡಕೆ ಹಾಳೆ, ಕಾಗದದ ಲೋಟ, ತಿಂಡಿಗೂ ಕಾಗದದ ತಟ್ಟೆ ಬಳಸಲಾಗಿದೆ. ಕಸ ಎತ್ತಲೂ ನಿರಂತರ ವ್ಯವಸ್ಥೆ ಮಾಡಲಾಗಿದೆ.
ಸ್ವರ್ಣವಲ್ಲೀಯಲ್ಲಿಂದು:
ಬುಧವಾರ ಶಿಷ್ಯ ಸ್ವೀಕಾರದ ಪೂರ್ವಾಂಗದ ಕಾರ್ಯಕ್ರಮಗಳು ಇರುವುದರಿಂದ ಹತ್ತರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪಾಹಾರದ ಕೌಂಟರ್ ಮತ್ತು ಬೆಳಗ್ಗೆಯಿಂದ ಸಂಜೆ ತನಕ ಎಳ್ಳಿನ ನೀರಿನ ವ್ಯವಸ್ಥೆ, ಚಹಾ, ಕಷಾಯ, ತಿಂಡಿ ಇಡಲಾಗಿದೆ. ಎರಡು ತಿಂಗಳ ಶ್ರಮ ಐದು ದಿನಗಳಲ್ಲಿ ಸಂಭ್ರಮವಾಗಿ ಕಾಣಬೇಕಿದೆ ಎಂದು ಅನಂತ ಭಟ್ಟ ಹೇಳಿದರು.ಫೆ. ೨೨ರಂದು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಆಗಮಿಸುವ ಯತಿಗಳನ್ನು, ಸ್ವರ್ಣವಲ್ಲೀ ಶ್ರೀಗಳನ್ನು, ಸನ್ಯಾಸ ಸ್ವೀಕಾರದ ನೂತನ ಶ್ರೀಗಳನ್ನೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುತ್ತಿದ್ದು, ಬೆಳಗ್ಗೆ ೮.೩೦ರೊಳಗೆ ಸ್ವರ್ಣವಲ್ಲೀ ಮಠದಲ್ಲಿ ಇರಬೇಕಿದೆ ಎಂದು ಗೀತಾ ಹೆಗಡೆ ಶೀಗೇಮನೆ ತಿಳಿಸಿದರು.