ಗೋಕರ್ಣ: ಹಳಿಯಾಳ ತೇರಗಾಂವದ ಸಂತ ಚರಣ ಸೇವಕ ಕೇದಾರಿ ಅಮೃತ ತಹಶೀಲ್ದಾರ ನೇತೃತ್ವದಲ್ಲಿ ಅವರ ಗುರುವಿನ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣದಿಂದ ಶ್ರೀಕ್ಷೇತ್ರ ಪಂಢರಪುರದವರೆಗೆ ೩೭ನೇ ಆಷಾಡ ದಿಂಡಿ ಯಾತ್ರೆ ಶನಿವಾರ ಮಹಾಬಲೇಶ್ವರ ಮಂದಿರದಿಂದ ಪ್ರಾರಂಭವಾಯಿತು.
ನಂತರ ಮಾತನಾಡಿದ ಕೌಸ್ತುಭ ವಾಸ್ಕರವರು ಶಿವ ಹಾಗೂ ವಿಷ್ಟು ಭಕ್ತರು ಸೇರಿ ಪ್ರತಿ ವರ್ಷ ಪಾದಯಾತ್ರೆ ನಡೆಸುತ್ತೇವೆ. ಪಾಂಡುರಂಗನ ದರ್ಶನ ಮಾಡಿ ಧನ್ಯತೆ ಪಡೆಯುವ ಪರಂಪರೆ ಬಹುವರ್ಷದಿಂದ ನಿರಂತರವಾಗಿ ನಡೆದು ಬಂದಿದೆ. ಅದರಂತೆ ಈ ವರ್ಷವೂ ನಡೆಯುತ್ತಿದೆ. ದಿಂಡಿಯ ಕೊನೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ ಎಂದರು.
ಚಿಕ್ಕಮಕ್ಕಳಿಂದ, ಯುವಕರು, ವಯೋವೃದ್ಧರು, ಮಹಿಳೆಯರು ಸಹ ದೇವರ ಭಕ್ತಿಯ ಪಾದಯಾತ್ರೆಯಲ್ಲಿ ಒಂದು ತಿಂಗಳ ಕಾಲ ಪಾಲ್ಗೊಳ್ಳುತ್ತಾರೆ. 500 ಕಿ.ಮೀ. ಹೆಚ್ಚು ದೂರ ಸಾಗುತ್ತಾರೆ. ಅಲ್ಲಿನ ಜನರು ಊಟದ ವ್ಯವಸ್ಥೆ ಕಲ್ಪಿಸುತ್ತಾರೆ. ಸಂಜೆ ಗುಂಡಬಾಳದಲ್ಲಿ ವಸತಿ ಮಾಡಿ ಅಲ್ಲಿಂದ ಮುಂಜಾನೆ ಚನ್ನಾಪುರ, ಸಂಜೆ ಯಲ್ಲಾಪುರ ಹೀಗೆ ಮಾರ್ಗದ ವಿವಿಧ ಗ್ರಾಮ, ಪಟ್ಟಣಗಳಲ್ಲಿ ಪಾದಯಾತ್ರಿಗಳಿಗೆ ವ್ಯವಸ್ಥೆ ಮಾಡುವುದು ವಿಶೇಷವಾಗಿದೆ. ನಿರಂತರವಾಗಿ ೩೭ ವರ್ಷಗಳಿಂದ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಒಟ್ಟಾರೆ ಭೂಕೈಲಾಸದಿಂದ ಹೊರಟ ದಿಂಡಿ, ಭೂ ವೈಕುಂಠ ಕ್ಷೇತ್ರಕ್ಕೆ ಜುಲೈ ೪ ಅಂದರೆ ಆಷಾಡ ಮಾಸ ನವಮಿಯಂದು ತಲುಪಲಿದೆ. ಬೆಳಗಾವಿ, ಗೋಕಾಕ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಜನರು ಈ ದಿಂಡಿಯಲ್ಲಿದ್ದು, ಪ್ರಸ್ತುತ ೩೦೦ಕ್ಕೂ ಹೆಚ್ಚು ಜನರಿದ್ದಾರೆ.