ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ದಾಸೋಹಕ್ಕೆ 16 ಲಕ್ಷ ರೊಟ್ಟಿ ನೀಡಿದ ಭಕ್ತರು

KannadaprabhaNewsNetwork |  
Published : Jan 27, 2024, 01:17 AM IST
26ಕೆಪಿಎಲ್21 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ಬಂದಿರುವ ಲಕ್ಷ ಲಕ್ಷ ರೊಟ್ಟಿಗಳು | Kannada Prabha

ಸಾರಾಂಶ

ಸಾವಿರಾರು ರೊಟ್ಟಿಗಳನ್ನು ತಂದು ಕೊಡುತ್ತಿರುವ ಭಕ್ತರು ತಮ್ಮೂರಿನಿಂದಲೇ ಮೆರವಣಿಗೆಯಲ್ಲಿ ರೊಟ್ಟಿಗಳನ್ನು ತಂದುಕೊಡುತ್ತಿದ್ದಾರೆ. ಟ್ರ್ಯಾಕ್ಟರ್, ಟಂಟಂ ಸೇರಿದಂತೆ ನಾನಾ ವಾಹನಗಳಲ್ಲಿ ರೊಟ್ಟಿಗಳನ್ನು ತಂದು ನೀಡುತ್ತಿರುವುದು ಸಾಮಾನ್ಯವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾ ದಾಸೋಹ ಹಲವು ವೈಶಿಷ್ಟ್ಯಗಳಿಗೆ ಕಾರಣವಾಗುತ್ತ, ಹಲವಾರು ಪ್ರಥಮಗಳನ್ನು ದಾಖಲಿಸುತ್ತಾ ಬಂದಿದೆ. 5 ಲಕ್ಷ ಮಿರ್ಚಿ ಬಜ್ಜಿಯನ್ನು ಭಕ್ತರಿಗೆ ದಾಸೋಹದಲ್ಲಿ ನೀಡುವುದು, 8 ಲಕ್ಷ ಶೇಂಗಾ ಹೋಳಿಗೆ ಬಡಿಸುವುದರ ಜೊತೆ ಜಾತ್ರೆಯ ದಾಸೋಹಕ್ಕೆ ಭಕ್ತರೇ 16-18 ಲಕ್ಷ ರೊಟ್ಟಿಗಳನ್ನು ಸ್ವಯಂಪ್ರೇರಣೆಯಿಂದ ತಂದು ಕೊಡುತ್ತಿದ್ದು ಇದು ಸಹ ದಾಖಲೆಯಾಗಿದೆ.

ರಥೋತ್ಸವ ಪ್ರಾರಂಭವಾಗುವ ಮುನ್ನವೇ ಈ ವರ್ಷ 13-14 ಲಕ್ಷ ಕ್ಕೂ ಅಧಿಕ ರೊಟ್ಟಿಗಳು ಆಗಮಿಸಿದ್ದು, ಇನ್ನೂ ಬರುತ್ತಲೇ ಇವೆ.ಈ ವರ್ಷ ಜಾತ್ರೆಯಲ್ಲಿ 16-18 ಲಕ್ಷ ರೊಟ್ಟಿಗಳು ಬರುವ ನಿರೀಕ್ಷೆ ಇದೆ. ಕಳೆದ ಬಾರಿಗಿಂತಲೂ ಈ ಬಾರಿ 1-2 ಲಕ್ಷ ರೊಟ್ಟಿಗಳು ಅಧಿಕವಾಗಲಿವೆ ಎನ್ನುತ್ತಾರೆ ದಾಸೋಹ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಕಾಶ ಚಿನಿವಾಲರ.ರೊಟ್ಟಿಗಳ ಮೆರವಣಿಗೆ: ಸಾವಿರಾರು ರೊಟ್ಟಿಗಳನ್ನು ತಂದು ಕೊಡುತ್ತಿರುವ ಭಕ್ತರು ತಮ್ಮೂರಿನಿಂದಲೇ ಮೆರವಣಿಗೆಯಲ್ಲಿ ರೊಟ್ಟಿಗಳನ್ನು ತಂದುಕೊಡುತ್ತಿದ್ದಾರೆ. ಟ್ರ್ಯಾಕ್ಟರ್, ಟಂಟಂ ಸೇರಿದಂತೆ ನಾನಾ ವಾಹನಗಳಲ್ಲಿ ರೊಟ್ಟಿಗಳನ್ನು ತಂದು ನೀಡುತ್ತಿರುವುದು ಸಾಮಾನ್ಯವಾಗಿದೆ.ಗವಿಮಠದ ಆವರಣಕ್ಕೆ ಬರುವ ದವಸ ಧಾನ್ಯ, ರೊಟ್ಟಿಗಳನ್ನು ಸಂಗ್ರಹಿಸುವುದು ದೊಡ್ಡ ಸವಾಲಾಗಿದೆ.250 ಕ್ವಿಂಟಲ್ ಮಾದಲಿ: ಗವಿಸಿದ್ಧೇಶ್ವರ ಗೆಳೆಯರ ಬಳಗದವರು 250 ಕ್ವಿಂಟಲ್ ಮಾದಲಿ ಸಿದ್ಧಪಡಿಸಿ ದಾಸೋಹಕ್ಕೆ ನೀಡಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಬರೋಬ್ಬರಿ 50 ಕ್ವಿಂಟಲ್ ಮಾದಲಿ ಹೆಚ್ಚಳ ಮಾಡಿದ್ದಾರೆ. ಗೆಳೆಯರೆಲ್ಲರೂ ಸೇರಿಕೊಂಡು ಹಲವಾರು ಗ್ರಾಮಗಳಿಗೆ ಪೂರಕ ಸಾಮಗ್ರಿ ನೀಡಿ ಮಾದಲಿ ಸಿದ್ಧ ಮಾಡಿಸಿಕೊಟ್ಟಿದ್ದಾರೆ.ಕ್ವಿಂಟಲ್ ಗಟ್ಟಲೇ ಮೈಸೂರುಪಾಕ್: ರಿಯಲ್ ಎಸ್ಟೇಟ್ ಏಜೆಂಟ್ಸ್ ಆ್ಯಂಡ್ ಡೆವಲಪರ್ಸ್ ಗೆಳೆಯರ ಬಳಗದಿಂದ ನಾಲ್ಕಾರು ಕ್ವಿಂಟಲ್ ಮೈಸೂರು ಪಾಕ್ ಮಾಡಿ ದಾಸೋಹಕ್ಕೆ ನೀಡುತ್ತಾರೆ. ಸಿಹಿ ಪದಾರ್ಥದ ಬೇಡಿಕೆ ನೋಡಿಕೊಂಡು, ಮೈಸೂರು ಪಾಕ್ ಸಿದ್ಧ ಮಾಡಿಕೊಡುತ್ತಾರೆ. ಕೆಲವೊಂದು ಬಾರಿ ಹತ್ತು ಕ್ವಿಂಟಲ್ ಮೈಸೂರ ಪಾಕ್ ನೀಡಿದ ಉದಾಹರಣೆಗಳೂ ಇವೆ.ಬೆಳಗಾವಿಯ ಗೆಳೆಯರ ಬಳಗದವರು ಪ್ರತಿ ವರ್ಷವೂ ನಾಲ್ಕಾರು ಕ್ವಿಂಟಲ್ ಸೋನ್ ಪಾಪಡಿ ತಂದು ಕೊಡುತ್ತಾರೆ. ಅವರು ತಮ್ಮ ಹೆಸರು, ಪರಿಚಯವನ್ನು ಗೌಪ್ಯವಾಗಿಟ್ಟಿದ್ದಾರೆ. ಆ ರೀತಿಯಲ್ಲಿ ಗವಿಸಿದ್ಧನ ಸೇವೆ ಸಲ್ಲಿಸುತ್ತಿದ್ದಾರೆ.ಹೀಗೆ ದಾಸೋಹದಲ್ಲಿ ಕೇವಲ ರೊಟ್ಟಿ, ಸಿಹಿ ಪದಾರ್ಥಗಳಲ್ಲದೇ. ಸಿಹಿ ಕರ್ಚಿಕಾಯಿ, ರವೆ ಉಂಡಿಯನ್ನು ಸಹ ಕ್ವಿಂಟಲ್ ಗಟ್ಟಲೇ ನೀಡಲಾಗುತ್ತದೆ. ಈಗಾಗಲೇ ಕರದಂಟು, ಕರ್ಚಿಕಾಯಿ, ರವೆ ಉಂಡಿ ಸೇರಿ ಸುಮಾರು 10 ಕ್ವಿಂಟಲ್‌ಗೂ ಅಧಿಕ ಖಾಧ್ಯಗಳನ್ನು ತಂದು ಕೊಟ್ಟಿದ್ದಾರೆ.ಈಗಾಗಲೇ 13-14 ಲಕ್ಷ ರೊಟ್ಟಿ ಬಂದಿವೆ. ನಿತ್ಯವೂ ಹತ್ತಾರು ಸಾವಿರ ರೊಟ್ಟಿಗಳು ಬರುತ್ತಲೇ ಇವೆ. ಹೀಗಾಗಿ 16-18 ಲಕ್ಷಕ್ಕೂ ಅಧಿಕ ರೊಟ್ಟಿಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ದಾಸೋಹ ಉಸ್ತುವಾರಿ ರಾಮನಗೌಡ.ಪ್ರತಿ ವರ್ಷವೂ ಮಹಾದಾಸೋಹಕ್ಕೆ ನಾಲ್ಕಾರು ಕ್ವಿಂಟಾಲ್ ಮೈಸೂರುಪಾಕ್ ನೀಡಲಾಗುತ್ತದೆ. ಕೆಲವೊಂದು ಬಾರಿ ಹತ್ತು ಕ್ವಿಂಟಲ್ ಮಾಡಿಕೊಟ್ಟಿರುವ ಉದಾಹರಣೆಗಳು ಇವೆ ಎನ್ನುತ್ತಾರೆ ಅರ್ಜುನ್ ಸಾ ಕಾಟ್ವಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ