ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಅಪಪ್ರಚಾರಕ್ಕೆ ಭಕ್ತರು, ಅಭಿಮಾನಿಗಳ ಖಂಡನೆ

KannadaprabhaNewsNetwork |  
Published : Aug 21, 2025, 01:00 AM IST
20ಕೆಎಂಎನ್ ಡಿ11,12 | Kannada Prabha

ಸಾರಾಂಶ

ಹಿಂದೂ ಧರ್ಮದ ವಿರುದ್ಧ ದೇಶದಾದ್ಯಂತ ಇಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರ ಇದುವರೆಗೂ ಕಿಡಿಗೇಡಿಗಳನ್ನು ಬಂಧಿಸದೆ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಸಮಗ್ರ ಕರ್ನಾಟಕದ ನೆಲ ಅಗೆದರೂ ಸತ್ಯದ ಸಮಾಧಿಯಾಗುವುದಿಲ್ಲ. ಧರ್ಮಸ್ಥಳದ ಮಣ್ಣು ಅಗೆದ ಅಧರ್ಮಿ ಸರ್ಕಾರ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಉಣ್ಣಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಶ್ರೀಕ್ಷೇತ್ರದ ಅಭಿಮಾನಿ ವೇದಿಕೆ, ಭಕ್ತರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಅಭಿಮಾನಿ ವೇದಿಕೆಯಡಿ ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಸಾವಿರಾರು ಮಂದಿ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಥಾ ನಡೆಸಿದರು.

ನಂತರ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಖಂಡನಾ ಸಭೆ ನಂತರ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. ಅನಾಮಿಕನ ದೂರಿನ ಆಧಾರದಲ್ಲಿ ಸರ್ಕಾರ ಎಸ್‌ಐಟಿ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಇದನ್ನು ಸ್ವಾಗತಿಸುತ್ತೇವೆ ಎಂದರು.

ಆದರೆ, ಉಚ್ಚ ನ್ಯಾಯಾಲಯ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಕ್ಷೇತ್ರದ ಬಗ್ಗೆ ಮತ್ತು ಡಾ.ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದೆಂದು ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶವನ್ನು ಮೀರಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣನವರ್, ಎಂ.ಡಿ.ಸಮೀರ್, ಸಂತೋಷ್ ಶೆಟ್ಟಿ, ಟಿ.ಜಯಂತ್, ಅಜಯ್ ಅಂಚನ್ ಮುಂತಾದವರು ಕ್ಷೇತ್ರದ ಬಗ್ಗೆ ಅಪಪ್ರಚಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಜನರ ನಂಬಿಕೆ ಹಾಳು ಮಾಡಲು ಕಾಣದ ಕೈಗಳು ವ್ಯವಸ್ಥಿತ ಕೆಲಸ ಮಾಡುತ್ತಿವೆ. ಸರ್ಕಾರ ಧರ್ಮಸ್ಥಳದ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಸಿ ಷಡ್ಯಂತ್ರ ಮಾಡುತ್ತಿರುವವರನ್ನು ಇದುವೆರಗೂ ಬಂಧಿಸಿ ವಿಚಾರಣೆಗೆ ಏಕೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿದರು.

ಅಪಪ್ರಚಾರದ ಹಿಂದೆ ಹಿಂದೂ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ. ಸರ್ಕಾರ ಮೊದಲು ತಲೆ ಬುರುಡೆ ತಂದ ಅನಾಮಿಕ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಬೇಕು. ಆತ ತಂದಿರುವ ತಲೆ ಬುರುಡೆ ಯಾರದ್ದು?. ಎಲ್ಲಿಂದ ತಂದಿದ್ದಾನೆ ಎಂಬುದನ್ನು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಹಿಂದೂ ಧರ್ಮದ ವಿರುದ್ಧ ದೇಶದಾದ್ಯಂತ ಇಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರ ಇದುವರೆಗೂ ಕಿಡಿಗೇಡಿಗಳನ್ನು ಬಂಧಿಸದೆ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಸಮಗ್ರ ಕರ್ನಾಟಕದ ನೆಲ ಅಗೆದರೂ ಸತ್ಯದ ಸಮಾಧಿಯಾಗುವುದಿಲ್ಲ. ಧರ್ಮಸ್ಥಳದ ಮಣ್ಣು ಅಗೆದ ಅಧರ್ಮಿ ಸರ್ಕಾರ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಉಣ್ಣಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೇಬಿ ಮಠದ ಶಿವಬಸವ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರು ರಂಭಾಪುರಿ ಶಾಖಾಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮತ್ತು ಗವೀಮಠದ ಸ್ವತಂತ್ರ ಚನ್ನವೀರ ಸ್ವಾಮೀಜಿ ಮಾತನಾಡಿ ಧರ್ಮ ವಿರೋಧಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಸುಜೇಂದ್ರ ಕುಮಾರ್, ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರೆಸ್ ಕುಮಾರ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಅಕ್ಕಿಹೆಬ್ಬಾಳು ರಘು, ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ಮುಖಂಡರಾದ ತೋಂಟಪ್ಪಶೆಟ್ಟಿ, ಕೆ.ಶ್ರೀನಿವಾಸ್, ಬ್ಯಾಂಕ್ ಪರಮೇಶ್, ಬ್ಯಾಲದಕೆರೆ ನಂಜಪ್ಪ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ