ಕೊನೆ ಆಷಾಢ ಶುಕ್ರವಾರ ಶಕ್ತಿ ದೇವತೆಗಳಿಗೆ ಭಕ್ತರಿಂದ ವಿಶೇಷ ಪೂಜೆ

KannadaprabhaNewsNetwork |  
Published : Jul 19, 2025, 01:00 AM IST
18ಕೆಎಂಎನ್ ಡಿ22,23,24,25 | Kannada Prabha

ಸಾರಾಂಶ

ಕೊನೆ ಆಷಾಢ ಶುಕ್ರವಾರದ ಅಂಗವಾಗಿ ತಾಲೂಕಿನ ಹಳುವಾಡಿ ಗ್ರಾಮದ ಶ್ರೀಪಟ್ಟಲದಮ್ಮ ದೇವಿಗೆ ಅರ್ಚಕ ನಂದೀಶ್ ವಿಶೇಷ ಹೂವಿನ ಅಲಂಕಾರ ಮಾಡಿದ್ದರು. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಒಬ್ಬಟ್ಟಿನ ಜೊತೆಗೆ ಅನ್ನ ಸಂತರ್ಪಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ನಗರದ ಕಾಳಿಕಾಂಬೆ, ಚಾಮುಂಡೇಶ್ವರಿ, ಹುಚ್ಚಮ್ಮ ಸೇರಿ ವಿವಿಧ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ಕಾರ್‍ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ನಗರದ ಆದಿದೇವತೆ ಶ್ರೀ ಕಾಳಿಕಾಂಬೆ, ಶ್ರೀಚಾಮುಂಡೇಶ್ವರಿ ದೇವಾಲಯಗಳಲ್ಲಿ ದೇವರಿಗೆ ಬೆಳಗ್ಗಿನಿಂದಲೇ ವಿವಿಧ ಪೂಜೆಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ದೇವಳಕ್ಕೆ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಸುಭಾಷ್‌ ನಗರ ಶ್ರೀ ಹುಚ್ಚಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವರು ಮತ್ತು ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಧಾರ್ಮಿಕ ಕಾರ್‍ಯಕ್ರಮಗಳು ಜರುಗಿದವು. ಬೆಳಗ್ಗಿನಿಂದಲೇ ಗಣಪತಿ ಹೋಮ, ನಿಂಬೆಹಣ್ಣಿನ ಆರತಿ, ಪಂಚಾಮೃತಾದಿ ಅಭಿಷೇಕ, ದೇವಿಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ನಗರದ ನೂರಡಿ ರಸ್ತೆಯಲ್ಲಿ ಶ್ರೀ ಬಿಸಿಲು ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ದಾಸೋಹ , ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ನಗರದ ಚಿಕ್ಕೇಗೌಡನದೊಡ್ಡಿಯ ಶ್ರೀ ಚಾಮುಂಡೇಶ್ವರಿ ದೇವಾಲಯ, ಕಲ್ಲಹಳ್ಳಿ ಆಂಜನೇಯಸ್ವಾಮಿ ದೇವಾಲಯ ಸಂಕೀರ್ಣದ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ನಿವಾಸಿಗಳು ಬೆಳಗ್ಗಿನಿಂದಲೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಾಲೂಕಿನ ಹೊಳಲು ಗ್ರಾಮದಲ್ಲಿರುವ ಶ್ರೀ ಪಟ್ಟಲದಮ್ಮ, ಚಿತ್ತನಾಳಮ್ಮ ದೇವಾಲಯಗಳಲ್ಲಿ ವಿಶೇ಼ಷ ಪೂಜೆಗಳು ನಡೆದವು. ವಿಶೇಷವಾಗಿ ಹೂವಿನ ಅಲಂಕಾರ ಭಕ್ತರ ಗಮನಸೆಳೆಯಿತು. ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳನ್ನು ನಡೆಸಲಾಯಿತು.

ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮಕ್ಕಳು, ಮಹಿಳೆಯರು ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಆರತಿ ಬೆಳಗಿ ಹರಕೆ ತೀರಿಸಿದರು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.

ಕೊನೆ ಆಷಾಢ ಶುಕ್ರವಾರದ ಅಂಗವಾಗಿ ತಾಲೂಕಿನ ಹಳುವಾಡಿ ಗ್ರಾಮದ ಶ್ರೀಪಟ್ಟಲದಮ್ಮ ದೇವಿಗೆ ಅರ್ಚಕ ನಂದೀಶ್ ವಿಶೇಷ ಹೂವಿನ ಅಲಂಕಾರ ಮಾಡಿದ್ದರು. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಒಬ್ಬಟ್ಟಿನ ಜೊತೆಗೆ ಅನ್ನ ಸಂತರ್ಪಣೆ ನಡೆಯಿತು.

ನಗರದ ನೂರಡಿ ರಸ್ತೆಯ ವಿನಾಯಕ ಟೀ ಸ್ಟಾಲ್ ಗೆಳೆಯರ ಬಳಗದ ವತಿಯಿಂದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು, ಸಾರ್ವಜನಿಕರಿಗೆ ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾದ ವಿತರಿಸಿದರು. ಜಿಲ್ಲೆಯ ವಿವಿಧ ಶಕ್ತಿ ದೇವಾಲಯಗಳಲ್ಲೂ ಕೊನೆ ಆಷಾಢ ಶುಕ್ರವಾರದ ಅಂಗವಾಗಿ ಪೂಜೆ, ಹೋಮ, ಹವನ, ಅಭಿಷೇಕಗಳು ನೆರವೇರಿದವು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ