ಸಾಮೂಹಿಕ ದೀಪ ಬೆಳಗಿಸಿ ಗುರುವಿನ ನೆನೆದ ಭಕ್ತರು

KannadaprabhaNewsNetwork |  
Published : Sep 24, 2026, 02:30 AM IST
ಪೋಟೋ ವಡಿಕೆಪ್ಪಯ್ಯತಾತನ ನೆನೆದು ಸಾವಿರಾರು ಭಕ್ತರು ದೀಪ, ಮೌನ ಮೆರವಣಿ ನಡೆಸಿದರು.   | Kannada Prabha

ಸಾರಾಂಶ

ಹೃದಯಘಾತದಿಂದ ಲಿಂಗೈಕ್ಯರಾದ ಅಧ್ಯಾತ್ಮ ಜೀವಿ ವಡಿಕೆಪ್ಪಯ್ಯ ತಾತನವರಿಗೆ ಸಾವಿರಾರು ಭಕ್ತರು ಕಂಬನಿ ಮಿಡಿದು ಸಾಮೂಹಿಕ ದೀಪಗಳೊಂದಿಗೆ ಮೌನ ಮೆರವಣಿಗೆ ನಡೆಸಿದ್ದಾರೆ. ತಾಲೂಕಿನ ವಡಕಿ ಗ್ರಾಮದಲ್ಲಿ ಅಗಲಿದ ಗುರುವಿಗೆ ಬೆಳಕಿನ ನಮನ ಸಮರ್ಪಣೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ಪ್ರಹ್ಲಾದರೆಡ್ಡಿ ಮದಿನಾಳ

ಕನಕಗಿರಿ: ಹೃದಯಘಾತದಿಂದ ಲಿಂಗೈಕ್ಯರಾದ ಅಧ್ಯಾತ್ಮ ಜೀವಿ ವಡಿಕೆಪ್ಪಯ್ಯ ತಾತನವರಿಗೆ ಸಾವಿರಾರು ಭಕ್ತರು ಕಂಬನಿ ಮಿಡಿದು ಸಾಮೂಹಿಕ ದೀಪಗಳೊಂದಿಗೆ ಮೌನ ಮೆರವಣಿಗೆ ನಡೆಸಿದ್ದಾರೆ.

ತಾಲೂಕಿನ ವಡಕಿ ಗ್ರಾಮದಲ್ಲಿ ಅಗಲಿದ ಗುರುವಿಗೆ ಬೆಳಕಿನ ನಮನ ಸಮರ್ಪಣೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ವಡಿಕೆಪ್ಪಯ್ಯ ತಾತ ಸೆ. ೧೯ರಂದು ಹೃದಯಾಘಾತದಿಂದ ವಿಧಿವಶರಾಗಿದ್ದರು. ೧೦ ಸಾವಿರಕ್ಕೂ ಅಧಿಕ ಜನ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಸೆ. ೨೧ರಂದು ಗ್ರಾಮದ ಪವಾಡ ಪುರುಷ, ಶರಣ ತತ್ವಪದಕಾರ ಘಡಿವಡಕಿ ತಾತನ ಜಾತ್ರೆ ದಿನ ಪ್ರತಿವರ್ಷದಂತೆ ಉಚಿತ ಸಾಮೂಹಿಕ ವಿವಾಹ ನಡೆಯುತ್ತದೆ. ಪ್ರತಿವರ್ಷ ವಡಿಕೆಪ್ಪಯ್ಯ ತಾತ ನೇತೃತ್ವ ವಹಿಸುತ್ತಿದ್ದರು. ಈ ವರ್ಷ ತಾತನ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ.

ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರು ಸಂಜೆ ವೇಳೆ ಸಾಮೂಹಿಕ ಮೇಣದಬತ್ತಿ ಮೆರವಣಿಗೆ ನಡೆಸಿದ್ದಾರೆ. ವಡಿಕೆಪ್ಪಯ್ಯ ತಾತನ ನೆನೆದು ಭಕ್ತರು ಕಣ್ಣೀರು ಹಾಕಿದ್ದಾರೆ. ಗ್ರಾಮದ ದ್ಯಾಮಮ್ಮದೇವಿ ದೇಗುಲದಿಂದ ಆರಂಭವಾದ ದೀಪದ ಮೌನ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ಊರ ಹೊರಗಿನ ಘಡಿವಡಕಿ ದೇಗುಲದ ವರೆಗೂ ನಡೆಯಿತು. ಮೌನ ಮೆರವಣಿಗೆಯನ್ನು ಲಿಂ. ವಡಿಕೆಪ್ಪಯ್ಯ ತಾತನಿಗೆ ಭಕ್ತರು ಜೈಕಾರ ಕೂಗಿದರು.

ಕೊಡಗೈ ದಾನಿ ವಡಿಕೆಪ್ಪಯ್ಯ: ವಡಿಕೆಪ್ಪಯ್ಯ ತಾತ ಅವರು ಪೂಜೆ, ವ್ರತಾಚರಣೆಗಳ ಜತೆಗೆ ಅಧ್ಯಾತ್ಮವನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಒಳಿತು ಮಾಡುವ ಮನಸ್ಸುಳ್ಳವರಾಗಿದ್ದರು. ವಡಕಿ ಗ್ರಾಮದಲ್ಲಿ ವಡಿಕೆಪ್ಪಯ್ಯ ಶರಣರ ಜಾತ್ರೆಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ೨೦೦೮ರಲ್ಲಿ ಆರಂಭಿಸಿದರು. ಅಂದಿನಿಂದ ಇಲ್ಲಿಯವರೆಗೂ ಸಾಮೂಹಿಕ ವಿವಾಹ ಮಹೋತ್ಸವ ನಿರಂತರ ಸಾಗಿದೆ. ಇದೇ ಗ್ರಾಮದ ಜೀವಂತ ಸಮಾಧಿಯಾಗಿದ್ದ ತಿರುಕಪ್ಪಯ್ಯ, ಶರಣ ಘಡಿವಡಿಕೆಪ್ಪಯ್ಯರ ಮೂರ್ತಿ ಹಾಗೂ ಲಕ್ಷ್ಮೀದೇವಿ ರಥ ನಿರ್ಮಾಣಕ್ಕೆ ₹೧೫ ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದ್ದಾರೆ. ಅಲ್ಲದೇ ಭಕ್ತರ ಸಂಕಷ್ಟಗಳಿಗೆ ಮಿಡಿದು ಕೈಲಾದ ಧನಸಹಾಯ ಮಾಡುತ್ತಿದ್ದರು. ಇನ್ನೂ ಜಾತ್ರೆ, ಉತ್ಸವ, ಜವಳ, ನಾಮಕರಣ ಸೇರಿ ಮನೆಗೆ ಬಂದ ಭಕ್ತರಿಗೆ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಭಕ್ತರ ಪಾಲಿಗೆ ವಡಿಕೆಪ್ಪಯ್ಯತಾತ ಕೊಡಗೈ ದಾನಿಯಾಗಿದ್ದರು. ಅವರ ಸಾಮಾಜಿಕ ಕಳಕಳಿಗೆ ಸಾವಿರಾರು ಭಕ್ತರ ಮೌನ, ಬೆಳಕಿನ ಮೆರವಣಿಗೆ ಸಾಕ್ಷಿಯಾಗಿದೆ.

ಬಲು ಪ್ರೀತಿ: ವಡಿಕೆಪ್ಪಯ್ಯತಾತ ಎಂದರೆ ಗ್ರಾಮಸ್ಥರೆಲ್ಲರಿಗೂ ಬಲು ಪ್ರೀತಿ. ಸತ್ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದರು. ಭಕ್ತರ ಕಷ್ಟ, ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ಮನಸ್ಸುಳ್ಳವರಾಗಿದ್ದರು. ಸರ್ವರಿಗೂ ಸದಾ ಒಳಿತು ಭಯಸುವ ತಾತನವರ ಅಗಲಿಕೆಯಿಂದ ವಡಕಿ ಗ್ರಾಮ ದೇವರನ್ನು ಕಳೆದುಕೊಂಡಷ್ಟೆ ಬಡವಾಗಿದೆ ಎಂದು ಭಕ್ತ ಲಕ್ಷ್ಮಣ ಹೆಬ್ಬುಲಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ-ಬೆಳೆ ಸಮೃದ್ಧಿಗೆ ಜೋಕುಮಾರನ ಆರಾಧನೆ
ಹೊಸ ಯೋಚನೆಗಳ ಹರಿಕಾರ ಚಿದಂಬರರಾವ್‌ ಜಂಬೆ