ಕನ್ನಡಪ್ರಭ ವಾರ್ತೆ ಹಾಸನ
ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವ ಸಂದರ್ಭದಲ್ಲಿ ಏನೇ ಆರೋಗ್ಯ ಸಮಸ್ಯೆಗಳು ಕಂಡು ಬಂದರೂ ತುರ್ತು ಚಿಕಿತ್ಸೆ ನೀಡಲು ಯಾವುದೇ ತೊಂದರೆಯಾಗದಂತೆ ತಕ್ಷಣ ಅವರನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲು ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡು ಸಿದ್ಧರಾಗಿರಬೇಕು. ಹಿಮ್ಸ್ನಲ್ಲಿ ತಕ್ಷಣ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಶ್ರೀ ಹಾಸನಾಂಬ ತುರ್ತು ತಂಡ ರಚನೆ ಮಾಡಿ ಎಂದ ಅವರು ದಿನವಿಡೀ ವೈದ್ಯಕೀಯ ಸೇವೆ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತುರ್ತು ಸಂದರ್ಭದಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯ ರಕ್ತ ಲಭ್ಯವಿರುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದರು. ದೇವಿ ದರ್ಶನಕ್ಕೆ ಆಗಮಿಸುವ ವಿಶೇಷ ಚೇತನರು ಯುಡಿಐಡಿ ಕಾರ್ಡ್, ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಧಾರ್ ಕಾರ್ಡ್, ಒಂದು ವರ್ಷದೊಳಗಿನ ಮಕ್ಕಳಿರುವ ತಾಯಂದಿರು ಮಗುವಿನ ಜನನ ಪ್ರಮಾಣ ಪತ್ರ, ಗರ್ಭಿಣಿಯರು ತಾಯಂದಿರ ಕಾರ್ಡ್ ತರಬೇಕು ಎಂದು ತಿಳಿಸಿದರು. ದೇವಿ ದರ್ಶನಕ್ಕೆ ಇವರೊಂದಿಗೆ ಬಂದಿರುವ ಮನೆಯವರು ದರ್ಶನ ಪಡೆದು ಬರುವವರೆಗೆ ಕಾಯಲು ಹೊರಹೋಗುವ ದ್ವಾರದ ಬಳಿ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿರುತ್ತದೆ. ಅವರ ಕಡೆಯವರು ದೇವಿ ದರ್ಶನ ಪಡೆದು ಬಂದ ನಂತರ ಅವರೊಂದಿಗೆ ತೆರೆಳಬಹುದಾಗಿದೆ ಎಂದು ತಿಳಿಸಿದರು.ಭಕ್ತಾದಿಗಳಿಗೆ ಪ್ರಸಾದ ವಿತರಣೆಯಲ್ಲಿ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು. ಭಕ್ತಾದಿಗಳು ಧರ್ಮ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುವಾಗ ಬೇಸರವಾಗದಂತೆ ವೇದಿಕೆಯಲ್ಲಿ ಭಕ್ತಿ ಗೀತೆಗಳನ್ನು ಹಾಡಲು ಪೂರ್ವಸಿದ್ಧತೆಗೆ ಆಡಿಯೋ ಸಿಸ್ಟಂ ಸರಿಯಾಗಿರುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದರಲ್ಲದೆ, ಅಲ್ಲಲ್ಲಿಯೇ ಸ್ಕ್ರೀನ್ ಹಾಕುವಂತೆ ತಿಳಿಸಿದರು.ಕಲಾವಿದರಿಂದ ಕಾರ್ಯಕ್ರಮ:
ನೈವೇದ್ಯಕ್ಕೆ ಹಾಗೂ ದೇವಿ ಅಲಂಕಾರಕ್ಕಾಗಿ ಬಾಗಿಲು ಮುಚ್ಚಿದ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ಸಾಗುವ ಭಕ್ತಾದಿಗಳಿಗೆ ಬೇಸರವಾಗದಂತೆ ಮನೋರಂಜನೆ ನೀಡಲು ಉತ್ತಮ ಕಲಾವಿದರನ್ನು ಬಳಸಿಕೊಂಡು ಕಾರ್ಯಕ್ರಮ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೂವಿನ ಅಲಂಕಾರ ಮಾಡುವಾಗ ಎಚ್ಚರಿಕೆ ವಹಿಸಿ ವಿದ್ಯುತ್ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಅ.೨೯ರಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.ಸ್ವಚ್ಛತೆಗೆ ಆದ್ಯತೆ:ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ತಾತ್ಕಾಲಿಕ ಶೌಚಾಲಯಗಳ ಸ್ವಚ್ಚತೆ, ದೇವಾಲಯದ ಒಳ ಆವರಣ ಮತ್ತು ಹೊರ ಆವರಣದಲ್ಲಿ, ಸರತಿ ಸಾಲಿನಲ್ಲಿ, ಪ್ರಸಾದ ವಿತರಣೆ ಸ್ಥಳದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಹೆಸರು ಮತ್ತು ಮೊಬೈಲ್ ನಂಬರ್ ಪಟ್ಟಿ ಮಾಡುವಂತೆ ತಿಳಿಸಿದರು.
ಮಹಾನಗರ ಪಾಲಿಕೆಯ ಆವರಣದಲ್ಲಿ ಅ. ೩೦ರಂದು ಸಂಜೆ ೬ ಗಂಟೆಗೆ ಹಾಸನಾಂಬಾ ಸಾವಯವ ಮೇಳ ಉದ್ಘಾಟನೆ ಹಾಗೂ ಪರಿಸರ ಸ್ನೇಹಿ ಕೃಷಿಕರ ಬಳಗಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ನ.೫ರಂದು ಬೆಳಿಗ್ಗೆ ೧೧ ಗಂಟೆಗೆ ಮಹಾನಗರ ಪಾಲಿಕೆಯ ಆವರಣದಲ್ಲಿ ಪಾಕ ಸ್ಪರ್ಧೆ ನಡೆಸಲಾಗುತ್ತದೆ. ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಎಂಟು ತಾಲೂಕುಗಳ ಪ್ರಾದೇಶಿಕ ವಲಯದ ಸಿಹಿ ಮತ್ತು ಖಾರ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಬಂದು ಪ್ರದರ್ಶನ ನೀಡಲು ಅವಕಾಶವಿದ್ದು, ಈ ಮೂಲನೆಲದ ಹಳೇಯ ವಿಶೇಷ ಖಾದ್ಯಗಳನ್ನು ಪ್ರದರ್ಶನ ನೀಡಲು ಇದೊಂದು ಸುವರ್ಣಾ ವಕಾಶ ಎಂದು ಹೇಳಿದರು.ಜನದಟ್ಟಣೆ ನಿರ್ವಹಣೆ ಹಾಗೂ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆಗೆ ಸಹಕಾರಿಯಾ ಗುವಂತೆ ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ರೀತಿಯಲ್ಲಿ ಸಿಸಿ ಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜನರಿಗೆ ಮಾಹಿತಿ ಒದಗಿಸಲು ಆಗಿಂದಾಗ್ಗೆ ಧ್ವನಿ ವರ್ಧಕದಲ್ಲಿ ಅನೌನ್ಸ್ ಮಾಡುತ್ತಿರಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೋಡೆತ್ತು ಪ್ರದರ್ಶನ ಅ. ೩೧ರಂದು ಸಂಜೆ ೪ ಗಂಟೆಗೆ, ನ.೩ರಂದು ಬೆಳಿಗ್ಗೆ ೧೧ ಗಂಟೆಯಿಂದ ಟಗರು ಮತ್ತು ಓತ ಪ್ರದರ್ಶನ, ನ.೬ರಂದು ಸಂಜೆ ೫ ಗಂಟೆಗೆ ಹಾಲು ಕರೆಯುವ ಸ್ಪರ್ಧೆ, ನ.೮ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮುದ್ದು ಸಾಕುಪ್ರಾಣಿಗಳ ಪ್ರದರ್ಶನ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆಯಲಿದೆ ಎಂದ ಅವರು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಾಕ್ಸ್ 2::: ಗರ್ಭಿಣಿಯರಿಗೆ ತಾಯಂದಿರ ಕಾರ್ಡ್, ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ಕಡ್ಡಾಯ
-----============
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಹಾಸನಾಂಬಾ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಕುರಿತು ಜಿಲ್ಲಾಧಿಕಾರಿ ಸಭೆ ನಡೆಸಿದರು.