ದಾಂಡೇಲಿ: ಮಕರ ಸಂಕ್ರಾಂತಿ ಅಂಗವಾಗಿ ಕಾಳಿ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ, ಗಂಗಾಪೂಜೆ ನೆರವೇರಿಸಿದರು.
ನಗರ ಸಮೀಪದ ಈಶ್ವರ ದೇವಸ್ಥಾನ, ಮೃತ್ಯುಂಜಯ ಮಠ, ಹಳೆಯ ದಾಂಡೇಲಿಯ ಬೈಲಪಾರು ಸೇತುವೆ ಹತ್ತಿರವೂ ನೂರಾರು ಸಂಖ್ಯೆಯಲ್ಲಿ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಹಾವೇರಿ, ಬೈಲಹೊಂಗಲ, ಸವದತ್ತಿ, ಬೆಳಗಾವಿ, ಧಾರವಾಡ, ಹಳಿಯಾಳ, ಯಲ್ಲಾಪುರ, ಗದಗ, ಹುಬ್ಬಳ್ಳಿ ಮುಂತಾದ ಪ್ರದೇಶಗಳಿಂದ ಜನರು ಆಗಮಿಸಿದ್ದರು.ಪಾರ್ಕ್ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಆಸನ ವ್ಯವಸ್ಥೆ, ಮಕ್ಕಳು ಆಟ ಆಡಲು ಆಟಿಕೆ ಇರುವುದರಿಂದ ಹಬ್ಬದ ಜತೆಗೆ ಮಕ್ಕಳಿಗೂ ಮನರಂಜನೆ ಲಭಿಸಿತು. ಕುಟುಂಬ ಸಮೇತರಾಗಿ ಸಿಹಿ ಅಡುಗೆ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡಿ ಹಬ್ಬವನ್ನು ಖುಷಿಯಿಂದ ಕಳೆದವು ಎಂದು ಧಾರವಾಡದ ನಿವಾಸಿ ಮಂಜುನಾಥ ಅಕ್ಕಸಾಲಿಗ ಹೇಳಿದರು.
ಜ. 14 ಮತ್ತು 15ರಂದು ಮೌಳಂಗಿ ಇಕೋ ಪಾರ್ಕ್‌ಗೆ ಭದ್ರತೆ ದೃಷ್ಟಿಯಿಂದ ಅರಣ್ಯ ಇಲಾಖೆ 80ಕ್ಕೂ ಹೆಚ್ಚಿನ ಅರಣ್ಯ ಪಾಲಕರನ್ನು ಹಾಗೂ ಪೊಲೀಸ್ ಇಲಾಖೆ 30 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿತ್ತು. ದ್ವಿಚಕ್ರವಾಹನ, ಕಾರು, ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಪ್ರವಾಸಿಗರ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.ಬುಧವಾರ ಮೌಳಂಗಿ ಇಕೋ ಪಾರ್ಕ್‌ಗೆ 2500ಕ್ಕೂ ಹೆಚ್ಚು ಪ್ರವಾಸಿಗರ ಭೇಟಿ ನೀಡಿದ್ದರು. ಗುರುವಾರ 4 ಸಾವಿರಕ್ಕೂ ಹೆಚ್ಚಿಗೆ ಪ್ರವಾಸಿಗರು ಆಗಮಿಸಿದ್ದರು ಎಂದು ಮೌಳಂಗಿ ಗ್ರಾಮ ಅರಣ್ಯ ಸಮಿತಿ ಅಧಿಕಾರಿಗಳು ಹೇಳಿದ್ದಾರೆ.
ದಾಂಡೇಲಿ ಗ್ರಾಮೀಣ ಠಾಣೆ ಪಿಎಸ್ಐ ಜಗದೀಶ್ ನಾಯ್ಕ, ಶಿವಾನಂದ ನವಲಗಿ, ಅಮೀನ ಅತ್ತಾರ ಹಾಗೂ ಸಿಬ್ಬಂದಿ ಹಾಗೂ ದಾಂಡೇಲಿ ಎಸಿಎಫ್ ಸಂತೋಷ ಚೌಹಾಣ್, ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಫ್, ಸಂದೀಪ ನಾಯಕ ಮೌಳಂಗಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಹಾರಾಜ ತರೋಟ ಇದ್ದರು.