ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿದವು. ಮುಂಜಾನೆಯಿಂದಲೇ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ವಿಶೇಷವಾಗಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು.
ನಗರದ ಬಿ.ಎಚ್. ರಸ್ತೆಯ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರಸ್ವಾಮಿ ದೇವಾಲಯ, ಸಿದ್ಧರಾಮೇಶ್ವರ ಬಡಾವಣೆಯಲ್ಲಿರುವ ಶ್ರೀ ಶಿವ- ಸುಬ್ರಹ್ಮಣ್ಯ- ಗಣಪತಿ ದೇವಾಲಯ, ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಕುಣಿಗಲ್ ರಸ್ತೆಯಲ್ಲಿರುವ ಮಾರುತಿ, ಬನಶಂಕರಿ ಮತ್ತು ಬಸವಣ್ಣ ದೇವಾಲಯ, ಅಮರಜ್ಯೋತಿನಗರದ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗ, ಟಿಜಿಎಂಸಿ ಬ್ಯಾಂಕ್ ಆವರಣದ ಲಕ್ಷ್ಮೀ ದೇವಾಲಯ, ಹೊರಪೇಟೆಯ ಕಾಶಿ ವಿಶ್ವನಾಥ ದೇವಾಲಯ, ಸಿದ್ಧರಾಮೇಶ್ವರ ಬಡಾವಣೆಯ ಈಶ್ವರ ದೇವಾಲಯ, ಸರಸ್ವತಿಪುರಂ ಶಿವನ ದೇವಾಲಯ ಸೇರಿ ವಿವಿಧ ದೇವಾಲಯಗಳಿಗೆ ಮಹಾಶಿವರಾತ್ರಿಯಂದು ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಭಕ್ತರು ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ನಗರದ ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಮುಂಜಾನೆಯಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿವಿಧ ಪೂಜಾಕಾರ್ಯ ನೆರವೇರಿದವು. ಬಿ.ಎಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಭಕ್ತರಿಗಾಗಿ ವಿಶೇಷವಾಗಿ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಮರಜ್ಯೋತಿನಗರ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತಾದಿಗಳು ಮುಂಜಾನೆಯಿಂದಲೇ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಶ್ರೀರಾಮನಗರದ ಅಮಾನಿಕೆರೆ ಸಮೀಪವಿರುವ ಅಖಿಲ ಉಪ್ಪಾರ ಸಂಘದ ವಿದ್ಯಾಭಿವೃದ್ಧಿ ಕಟ್ಟಡದ ಮೇಲ್ಭಾಗದಲ್ಲಿರುವ ಶಿವಲಿಂಗ ಮೂರ್ತಿಗೆ ಹಾಗೂ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ, ಬನಶಂಕರಿಯ ಮತ್ತು ಬಸವಣ್ಣ ದೇವಾಲಯದ ಮೇಲ್ಭಾಗದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಈ ಎರಡು ಶಿವನಮೂರ್ತಿಗಳಿಗೆ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡರು.