ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು ಹೊಸ ವರ್ಷವನ್ನು ದೈವ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡರು.ಸೋಮವಾರ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಇಡೀ ವರ್ಷ ನಮಗೆ ನೆಮ್ಮದಿ ಜೀವನಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ತಂಡೋಪ ತಂಡವಾಗಿ ಆಗಮಿಸುತ್ತಿದ್ದ ಭಕ್ತರು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿ ಬೆಟ್ಟದೊಡೆಯ ಕುಂತ ಸಿಂಗ್ರಿ ಹಾಗೂ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದರು.
ದೇವಾಲಯ ಧನುರ್ಮಾಸದ ಪ್ರಯುಕ್ತ ಬೆಳಗ್ಗಿನ 4 ಗಂಟೆಯಿಂದಲೇ ಆರಂಭವಾಗಿ 7 ಗಂಟೆಯವೇಳೆಗೆ ನಿತ್ಯಪೂಜೆಗಳು ಮುಕ್ತಾಯವಾದವು. ಇಡೀ ದಿನ ದೇವಾಲಯ ಮುಚ್ಚದೆ ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಬೆಳಗ್ಗೆ 11 ಗಂಟೆಯವರೆಗೆ ವಿರಳವಾದ ಭಕ್ತರು ಆಗಮಿಸಿದ ಕಾರಣ ಭಕ್ತರ ದಟ್ಟಣೆ ಕಂಡು ಬಂದಿರಲಿಲ್ಲ. ಆದರೆ, 12 ಗಂಟೆ ನಂತರ ವಿವಿಧ ವಾಹನಗಳಲ್ಲಿ ಭಕ್ತಸಾಗರವೇ ಹರಿದುಬಂತು. ರಾತ್ರಿಯವರೆಗೆ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯುತ್ತಿದ್ದ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.
ಆಟಿಕೆ ಸಾಮಾನುಗಳು, ಕಡಲೆಪುರಿ ಸಿಹಿತಿನಿಸುಗಳು, ಕಬ್ಬಿನಜ್ಯೂಸ್ ಹಾಗೂ ಪುಳಿಯೋಗರೆ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. 50 ಸಾವಿರಕ್ಕೂ ಅಧಿಕ ಭಕ್ತರು ದೇವರದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದ್ದರೂ ಈ ವರ್ಷ ಕಳೆವರ್ಷಕ್ಕಿಂತ ಕಡಿಮೆ ಭೇಟಿ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಮಹೇಶ್, ಪಾರುಪತ್ತೇಗಾರರಾದ ಶ್ರೀನಿವಾಸನರಸಿಂಹನ್ ಗುರೂಜಿ, ಎಂ,ಎನ್ ಪಾರ್ಥಸಾರಥಿ ಭಕ್ತರ ಸುಗಮ ದರ್ಶನಕ್ಕೆ ಬೇಕಾದ ಎಲ್ಲ ವ್ಯವಸ್ಥೆಮಾಡಿದ್ದರು. ಮೇಲುಕೋಟೆ ಪೊಲೀಸರು ವಾಹನಗಳಿಗೆ ಪಾರ್ಕಿಂಗ್ ಹಾಗೂ ಭಕ್ತರಿಗೆ ಭದ್ರತೆ ಮಾಡಿದ್ದರು.
ಜನ ಸಂದಣಿಯಿರುವ ಕಡೆ ಕೋವಿಡ್ ಮುಂಜಾಗ್ರತೆ ಅನುಸರಿಸುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ನೀಡಿದಂತೆ ದೇವಾಲಯಕ್ಕೆ ಬರುವ ಭಕ್ತರು ಮಾಸ್ಕ್ ಧರಿಸಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ದೇವಾಲಯದಿಂದ ಭಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ, ಭಕ್ತರು ಯಾವುದೇ ಮುನ್ನೆಚ್ಚರಿಕೆವಹಿಸದೆ ಮಾಸ್ಕ್ ಧರಿಸದೇ ಜನಜಂಗುಳಿಯಲ್ಲೇ ಸಾಗಿ ದೇವರ ದರ್ಶನ ಪಡೆದರು.ಮೆಟ್ಟಿಲು ಹತ್ತುವಾಗ ಹೃದಯಾಘಾತ ವೃದ್ಧೆ ಸಾವುಹೊಸ ವರ್ಷದ ಹಿನ್ನೆಲೆಯಲ್ಲಿ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟ ಹತ್ತುವ ವೇಳೆ ವೃದ್ಧೆ ಹೃದಯಾಘಾತಂದಿಂದ ಮೃತಪಟ್ಟ ಘಟನೆ ಸೋಮವಾರ ನಡೆಯಿತು.ರಾಮನಗರ ಜಿಲ್ಲೆಯ ಕಂಚುಗಾರನಹಳ್ಳಿಯ ರಾಮಕೃಷ್ಣಯ್ಯರ ಪತ್ನಿ ಶಾರದಮ್ಮ(74) ಏಕಾಂಗಿಯಾಗಿ ಮೇಲುಕೋಟೆ ದೇವರ ದರ್ಶನಕ್ಕೆ ಆಗಮಿಸಿ ಪಂಚಕಲ್ಯಾಣಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡ ಬಳಿಕ ಕಲ್ಯಾಣಿಗೆ ಪೂಜೆ ಸಲ್ಲಿಸಿ ಯೋಗಾನರಸಿಂಹ ಸ್ವಾಮಿ ಬೆಟ್ಟ ಹತ್ತುವಾಗ ಅರ್ಧದಲ್ಲೇ ಹೃದಯಘಾತ ಸಂಭವಿಸಿದೆ. ಭಕ್ತರು ತಕ್ಷಣ ಆಸ್ವತ್ರೆಗೆ ರವಾನಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮಾಹಿತಿ ತಿಳಿದ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಆಸ್ವತ್ರೆಗೆ ರವಾನಿಸಿ ಕುಟುಂಬಸ್ಥರ ಮಾಹಿತಿ ಪಡೆದು ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಂತರ ಸಂಜೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.