ಕುದಿಯುವ ಎಣ್ಣೆಯಿಂದ ವಡೆ ತೆಗೆದ ಭಕ್ತರು

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಕುದಿಯುವ ಎಣ್ಣೆಯಲ್ಲಿ ಬರಿಗೈನಿಂದ ವಡೆ ತೆಗೆಯುವ ಸಂಪ್ರದಾಯ ಭಕ್ತಿ ಪೂರ್ವಕವಾಗಿ ನಡೆಯಿತು.

ಹೊನ್ನಾವರ:

ತಾಲೂಕಿನ ಮಾವಿನಕುರ್ವೆಯ ಜಾಗೃತ ಶಕ್ತಿಕೇಂದ್ರ ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಅಶ್ವಿಜ ಶುದ್ಧ ಪೌರ್ಣಿಮೆಯ ಪ್ರಯುಕ್ತ ಭಕ್ತರಿಂದ ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ತೈಲ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ವಿಜೃಂಭಣೆಯಿಂದ ನಡೆದವು.

ಬೆಳಗ್ಗೆ ದೇವತಾಕಾರ್ಯ, ನವಚಂಡಿ ಹವನ, ಮಹಾಪೂರ್ಣಾಹುತಿ, ಮಹಾಪ್ರಾರ್ಥನೆಯೊಂದಿಗೆ ಮಂಗಳಾರತಿ ನಡೆಯಿತು. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಚಂದ್ರಗ್ರಹಣ ಹಿನ್ನಲೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸ್ವಲ್ಪ ಮುಂಚಿತವಾಗಿ ನಡೆದವು. ದೇವಿ ಸನ್ನಿಧಿಯಲ್ಲಿ ಸಿಂಹ ವಿಜಯ ರಥೋತ್ಸವ ಭಾನುವಾರ ನಡೆಯಲಿದೆ.

ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ತೈಲಸೇವೆ ಇಲ್ಲಿಯ ಜಾಗೃತ ಶಕ್ತಿ ಸ್ಥಳವಾಗಿ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಕುದಿಯುವ ಎಣ್ಣೆಯಲ್ಲಿ ಬರಿಗೈನಿಂದ ವಡೆ ತೆಗೆಯುವ ಸಂಪ್ರದಾಯ ಭಕ್ತಿ ಪೂರ್ವಕವಾಗಿ ನಡೆಯಿತು. ಶ್ರೀ ನವದುರ್ಗಾ ದೇವಿ, ಶ್ರೀ ಸನ್ನಿಧಿಯು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು.

Share this article