ದೇವಟ್ ಪರಂಬು: ಸಿಎನ್‌ಸಿ ಶ್ರದ್ಧಾಂಜಲಿ ಸಲ್ಲಿಕೆ

KannadaprabhaNewsNetwork | Published : Aug 1, 2024 12:18 AM

ಸಾರಾಂಶ

ಕುತಂತ್ರದಿಂದ ಕೊಡವರ ಹತ್ಯೆಯಾಗಿದೆ ಎನ್ನಲಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಕೊಡವಲ್ಯಾಂಡ್ ಪರ ಹಕ್ಕೊತ್ತಾಯ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುತಂತ್ರದಿಂದ ಕೊಡವರ ಹತ್ಯೆಯಾಗಿದೆ ಎನ್ನಲಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಕೊಡವಲ್ಯಾಂಡ್ ಪರ ಹಕ್ಕೊತ್ತಾಯ ಮಂಡಿಸಿದರು.

ವಿಶ್ವಾಸಘಾತುಕ ಕೆಳದಿ/ಪಾಲೇರಿ ರಾಜ ಪರಿವಾರದ ಅಧೀನದಲ್ಲಿದ್ದ ಕೊಡಗು ರಾಜ್ಯವನ್ನು ಪರಾಕ್ರಮಿ ಕೊಡವರು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದಿಂದ 32 ಕ್ಕೂ ಹೆಚ್ಚು ಬಾರಿ ಕಾಪಾಡಿದರು. ಈ ಸೋಲಿನ ಸೇಡು ತೀರಿಸಿಕೊಳ್ಳಲು, ಟಿಪ್ಪು ಕೊಡವ ಬುಡಕಟ್ಟು ಜನಾಂಗವನ್ನು ವಂಚನೆಯ ಮೂಲಕ ಸಂಪೂರ್ಣವಾಗಿ ನಾಶಮಾಡಲು ಸಂಚು ಹೂಡಿದನು. ಟಿಪ್ಪು ಸಂಚಿನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಸ್ಮರಣಾರ್ಥ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೂ ಕೊಡವರ ನರಮೇಧವನ್ನು ವಿಶ್ವ ರಾಷ್ಟ್ರಸಂಸ್ಥೆ ಯುಎನ್‌ಒ ಅಂತಾರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆದಿಮಸಂಜಾತ ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ಕಲ್ಪಿಸಬೇಕು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಕೊಡವ ಸಾಂಪ್ರದಾಯಿಕ ಸಂಸ್ಕಾರ ಗನ್ ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು ಎಂಬ ಒತ್ತಾಯವನ್ನು ಮುಂದಿಟ್ಟುಕೊಂಡು ಕಳೆದ ಅನೇಕ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಈ ಹಕ್ಕುಗಳು ಶೀಘ್ರ ಈಡೇರಲಿ ಎಂದು ಹಿರಿಯರಲ್ಲಿ ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದರು.

ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಚೀಯಬೇರ ಸತೀಶ್, ಆಲಮಂಡ ನೆಹರು ಹಾಗೂ ಅಪ್ಪಾರಂಡ ಪ್ರಕಾಶ್ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

Share this article