ಭಕ್ತಿ, ಸೇವೆ, ಸದ್ಭಾವನೆ ಬದುಕಿಗೆ ಬೆಳಕು: ಹೀರಾಲಾಲ್

KannadaprabhaNewsNetwork |  
Published : Oct 27, 2025, 12:30 AM IST
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು  | Kannada Prabha

ಸಾರಾಂಶ

ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಯಾವುದೇ ಕಾಯಕಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ.

ಶಿರಸಿ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಕನ್ನಡಪ್ರಭ ವಾರ್ತೆ ಕಾರವಾರ

ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಯಾವುದೇ ಕಾಯಕಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವಾ ಕಾರ್ಯದಲ್ಲಿ ತೊಡಗುವ ಮೂಲಕ ಭಗವಂತನ ಪ್ರೇರಣೆ ಮತ್ತು ಕೃಪೆಗೆ ಪಾತ್ರರಾಗಬೇಕು ಎಂದು ಶಿರಸಿ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಕರೆ ನೀಡಿದರು.

ನಗರದ ಕೋಡಿಬಾಗದ ಪುಣ್ಯಕ್ಷೇತ್ರ ಸಾಯಿಕಟ್ಟಾದಲ್ಲಿ ನಡೆದ 58ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂತಹ ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭಗವಂತನ ಪ್ರೀತಿಗೆ ಪಾತ್ರರಾಗುವ ಸೌಭಾಗ್ಯ ದೊರೆಯುತ್ತದೆ. ದೇವರು ಪ್ರತಿಯೊಬ್ಬ ಭಕ್ತರ ಮನಸ್ಸಿನಲ್ಲಿ ನೆಲೆಸಿರುತ್ತಾನೆ. ಆದ್ದರಿಂದ ನಾವು ಉತ್ತಮ ಸಂಸ್ಕಾರ, ಸಹಾಯ-ಸಹಕಾರ ಮತ್ತು ಮಾನವ ಸೇವೆ ಮೂಲಕ ದೇವರ ಪ್ರೀತಿ ಗಳಿಸಬೇಕು ಎಂದು ತಿಳಿಸಿದರು.

ಶ್ರೀಕ್ಷೇತ್ರ ಸಾಯಿಕಟ್ಟಾ, ಭಗವಾನ್ ಶ್ರೀ ಸತ್ಯಸಾಯಿಬಾಬಾ ಆಗಮಿಸಿ ಶಿರಡಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪಿಸಿದ ಪವಿತ್ರ ಭೂಮಿಯಾಗಿದೆ. ನಾನು ಈ ಕ್ಷೇತ್ರದ ಭಕ್ತನಾಗಿ ಆರಂಭದಿಂದಲೂ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಈ ಕ್ಷೇತ್ರದಲ್ಲಿಯೇ ನನ್ನ ಅನೇಕ ಸಂಕಷ್ಟಗಳು ಪರಿಹಾರವಾಗಿವೆ ಎಂದು ನುಡಿದರು.

ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಓ ಮಂಜುನಾಥ ನಾವಿ, ಭಕ್ತಿ ಮತ್ತು ನಂಬಿಕೆ ಇದ್ದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಪಡೆಯಲು ಸಾಧ್ಯವಿದೆ. ಮನಸ್ಸಿನಲ್ಲಿ ಬೇಡಿದ್ದನ್ನು ಸ್ವಾಮಿ ನೀಡುತ್ತಾನೆ ಎಂಬ ವಿಶ್ವಾಸದಿಂದ ಸತ್ಸಂಗದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಪುತ್ತೂರು ಸತ್ಯಸಾಯಿ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನ ಎಂ. ಮಧುಸೂದನ್ ನಾಯಕ್, ಶ್ರೀ ಸತ್ಯಸಾಯಿ ಬಾಬಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದಾಗಿ ಇಂದು ಜಗತ್ತಿನಾದ್ಯಂತ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಸಂಸ್ಥೆಯಿಂದ ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸತ್ಯ ಸಾಯಿಬಾಬಾ ಅವರ 100 ವರ್ಷದ ಜನ್ಮದಿನೋತ್ಸವದ ಅಂಗವಾಗಿ ನೂರು ದೇಶಗಳಲ್ಲಿ ನೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊಲಂಬಿಯಾದಲ್ಲಿ 70ನೇ ದಿನದ 70ನೇ ದೇಶದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಧನಿಕಾ ಪ್ರಕಾಶ ಹರಿಕಂತ್ರ, ಕ್ರಿಶಿಕಾ ಗಿರೀಶ ಉಳ್ವೇಕರ್, ಗಗನ್ ಗಣಪತಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಕ್ಷೇತ್ರದಲ್ಲಿ ಮುಂಜಾನೆಯಿಂದ ಸಂಜೆವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ದಿ. ಶಾಂತಾರಾಮ್ ಸೈರು ನಾಯ್ಕ ಕುಟುಂಬದಿಂದ ಹಾಗೂ ಶ್ರೀ ಸಾಯಿಕಟ್ಟಾ ಸಾಯಿಭಕ್ತ ಮಂಡಳಿಯಿಂದ ಭಜನೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಶಿವಾನಂದ ಎಲ್. ಮೇತ್ರಿ, ಎಂ.ಆರ್. ನಾಯ್ಕ. ಬಿಎಚ್ ನಾಯ್ಕ, ಸಿದ್ದರ ಸತ್ಯಸಾಯಿ ಸತ್ವನಿಕೇತನದ ಚೇರ್ಮನ್ ಎಚ್. ಗಿರೀಶ್, ಪ್ರಾಂಶುಪಾಲ ಅಶೋಕ ಗಾಂವಕರ್ ಇದ್ದರು.

PREV

Recommended Stories

ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ
ಅಜ್ರಿ ಗಾಣಿಗರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿ ಪ್ರದಾನ