ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬೀದಿನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಗೆ ನುಗ್ಗಿ ಅತಂಕ ಸೃಷ್ಟಿಸಿದ ಘಟನೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.ತೊಂಡೂರಿನಲ್ಲಿ ಸತತವಾಗಿ ಬೀದಿ ನಾಯಿಗಳಿಂದ ಜಿಂಕೆಗಳು ಬೇಟೆಗೆ ಒಳಗಾಗುತ್ತಿವೆ.
ಭಾನುವಾರ ಬೆಳಗ್ಗೆ ಅಟ್ಟಿಸಿಕೊಂಡು ಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಮುಖ್ಯ ರಸ್ತೆಯಲ್ಲಿರುವ ರಾಧಕೃಷ್ಣಪ್ಪ ಎಂಬವರ ಮನೆಗೆ ನುಗ್ಗಿದೆ. ಮನೆಯ ಹಾಲ್‌ನಲ್ಲಿ ಪ್ರಾಣ ರಕ್ಷಣೆಗಾಗಿ ಓಡಾಡಿದ ಜಿಂಕೆ, ಮಗುವಿನ ಆಟದ ಸಾಮಗ್ರಿಗಳನ್ನು ಹಾಳುಗೆಡಹಿದೆ. ಮನೆಯ ಬಾಗಿಲಿಗೆ ಡಿಕ್ಕಿ ಹೊಡೆದಿದೆ. ಹೇಗೂ ಹೊರ ಬಂದ ಜಿಂಕೆ ರಸ್ತೆ ದಾಟಿ ಅರಣ್ಯ ಪ್ರವೇಶಿಸುವಷ್ಟರಲ್ಲಿ ಮತ್ತೆ ನಾಯಿಗಳ ದಾಳಿಗೆ ಒಳಗಾಗಿ ಪ್ರಾಣ ಬಿಟ್ಟಿದೆ.ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಜಿಂಕೆಯ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಇದು ಹೆಣ್ಣು ಜಿಂಕೆಯಾಗಿದ್ದು, ಅಂದಾಜು 12 ಪ್ರಾಯದ್ದಾಗಿದೆ.ನಾಯಿ ದಾಳಿಗೆ 18 ಜಿಂಕೆ ಬಲಿ:ಜಿ.ಪಂ. ಮಾಜಿ ಸದಸ್ಯ, ಸಮಾಜ ಸೇವಕ ಆರ್.ಕೆ.ಚಂದ್ರು ಮಾತನಾಡಿ, ಈ ತಿಂಗಳಿನಲ್ಲಿ ಸರಿಸುಮಾರು 18 ಜಿಂಕೆಗಳು ಬೀದಿನಾಯಿ ದಾಳಿಗೆ ತುತ್ತಾಗಿ ಸಾವನ್ನಪ್ಪಿವೆ. ಬೀದಿ ನಾಯಿಗಳ ಹಾವಳಿಯನ್ನು ಗ್ರಾಮ ಪಂಚಾಯಿತಿ ನಿಯಂತ್ರಿಸಬೇಕಾಗಿದೆ. ಶನಿವಾರವೂ ಕೂಡ ಹಾಡಹಗಲೇ ಗರ್ಭಿಣಿ ಜಿಂಕೆಯೊಂದನ್ನು ನಾಯಿಗಳು ಬೇಟೆಯಾಡಿತ್ತು. ಅರಣ್ಯಕ್ಕೆ ಪ್ರವೇಶಿಸುವವರ ಮೇಲೆ ಮೊಕದ್ದಮೆ ದಾಖಲಿಸುವ ಅರಣ್ಯ ಇಲಾಖೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿ ಹಿಂಸೆಯಾಗುತ್ತಿದ್ದರೂ ಕೂಡ ಅಧಿಕಾರಿಗಳು ಮೌನವಾಗಿರುವುದು ಯಾಕೆ? ಬೀದಿನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ಪುನರ್‌ವಸತಿ ಕೇಂದ್ರವನ್ನು ತೆರೆಯುವಂತಾಗಬೇಕೆಂದು ಸಲಹೆ ನೀಡಿದ್ದಾರೆ..............................
ಜಿಂಕೆಗಳ ಸಾವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ಮಾಡಲಾಗುವುದು.। ಕೆ.ಎ.ದೇವಯ್ಯ ಉಪವಲಯಾ ಸಂರಕ್ಷಣಾಧಿಕಾರಿ