ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲ್ಲಾಪುರಹಣದಿಂದ ಮಾತ್ರ ಸುಖ ಎಂಬ ಭ್ರಮೆಯಲ್ಲಿದ್ದೇವೆ, ಇದು ಅಸತ್ಯವಾದುದು. ಅನ್ನ, ವಿದ್ಯೆ, ಔಷಧ ಇವುಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಇಂದು ಅವು ಮಾರಾಟದ ಸರಕಾಗಿ, ಬೃಹತ್ ಉದ್ಯಮಗಳಾಗಿ ಬೆಳೆದು ನಿಂತಿವೆ. ಇಷ್ಟಾದರೂ ನೆಮ್ಮದಿ ಇಲ್ಲ, ಸಮಾಧಾನ, ಶಾಂತಿ ಇಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಗವದ್ಗೀತೆಯಿಂದ ಮಾತ್ರ ಸಾಧ್ಯ ಎಂದು ಗೀತಾಜ್ಞಾನ ಯಜ್ಞದ ಪ್ರಧಾನ ಗುರು ಕೇರಳ ಕಾಸರಗೋಡಿನ ಸುಬ್ರಾಯ ನಂದೋಡಿ ಹೇಳಿದರು.
ಶನಿವಾರ ಪಟ್ಟಣದ ಶಕ್ತಿಗಣಪತಿ ಆವಾರದಲ್ಲಿ ದೇವಾಲಯದ ಆಡಳಿತ ಮಂಡಳಿ, ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಮಂಡಳ ಹದಿನೈದು ದಿನಗಳ ಕಾಲ ಹಮ್ಮಿಕೊಂಡ ಹನ್ನೆರಡನೇ ಕಾರ್ತಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಭಗವದ್ಗೀತೆ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದೆ. ನಮಗೆ ಎದುರಾಗುವ ಕಷ್ಟ, ನಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕು. ನಕಾರಾತ್ಮಕ ಚಿಂತನೆಗಳಿಂದ ಸೋಲುತ್ತೇವೆ. ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಲಭಿಸುತ್ತದೆ. ಭಗವಂತ ನಮಗೆಲ್ಲವನ್ನೂ ಕರುಣಿಸಿದ್ದಾನೆ. ಆದರೂ ಅಜ್ಞಾನದಿಂದ ಎಲ್ಲವನ್ನೂ ಪರರಿಂದ ಬೇಡುತ್ತೇವೆ. ಪ್ರತಿಯೊಬ್ಬರ ಮನೆಯಲ್ಲೂ ನಿತ್ಯವೂ ಗೀತೆ, ಸಹಸ್ರನಾಮಗಳನ್ನು ಪಾರಾಯಣ ಮಾಡಬೇಕು. ಪರೋಪಕಾರವೇ ಧರ್ಮ. ಇದು ನಮ್ಮ ಸಂಸ್ಕೃತಿಯಲ್ಲಿ ಬೆಳದು ಬಂದಿದೆ.ನಮ್ಮ ಮನೆ, ದೇವಾಲಯ ಆರಾಧನಾ ಕ್ಷೇತ್ರವಾಗಬೇಕು. ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕು. ಮಾನವ ಸಂಪತ್ತೇ ನಿಜವಾದ ಸಂಪತ್ತು ಎಂದರು.
ವಿದ್ವಾಂಸರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಯಜ್ಞ, ದಾನ, ತಪಸ್ಸು, ಕರ್ಮ ಹಾಗೂ ಗೀತೆಯ ಪಠಣದಿಂದ ಜೀವನ ಸಾರ್ಥಕವಾಗುತ್ತದೆ. ಆಚಾರ‍್ಯ ಶಂಕರರು ನಮಗೆ ಸನ್ಮಾರ್ಗ ತೋರಿದ್ದಾರೆ. ಇವುಗಳನ್ನು ನಿತ್ಯ ಅನುಷ್ಠಾನಗೊಳಿಸಿದರೆ ಶ್ರೇಯಸ್ಸು ಲಭಿಸುತ್ತದೆ ಎಂದರು.ಗೀತಾ ಅಭಿಯಾನದ ತಾಲೂಕಾ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟೀಗದ್ದೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಆದರ್ಶ ಮಹಿಳಾ ಮಂಡಳಿಯ ಉಷಾ ಗಾಂವ್ಕರ ಸ್ವಾಗತಿಸಿದರು. ಸಂಯೋಜಕ ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವಹಿಸಿದರು. ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ವಂದಿಸಿದರು. ಪರಮುಖರಾದ ಸುಬ್ರಾಯ ಭಟ್ಟ ಹಂಡ್ರಮನೆ, ಡಿ.ವಿ ಹೆಗಡೆ, ಶಾಂತಲಾ ಹೆಗಡೆ ಮತ್ತಿತರರಿದ್ದರು.