ಕೊಪ್ಪಳ: ನಗರದಲ್ಲಿ ಪೂಜೆ, ಆರತಿ ಹಾಗೂ ಭಾವಚಿತ್ರ ಮೆರವಣಿಗೆಯೊಂದಿಗೆ ಭಕ್ತಿಪೂರ್ವಕವಾಗಿ ಮಹಾವೀರ ಜಯಂತಿ ಆಚರಿಸಲಾಯಿತು. ನಗರದ ಎಸ್.ಎಸ್. ಜೈನ ಸಂಘದಲ್ಲಿ ಸಹ ಜಯಂತಿ ಆಚರಿಸಲಾಯಿತು.
ಎಸ್.ಎಸ್. ಜೈನ ಸಂಘದ ಮಹಿಳಾ ಮಂಡಳದ ಧನ ಸಹಯೋಗದಿಂದ ಬೇಸಿಗೆಯ ಬಿಸಿಲಿನ ತಾಪವನ್ನು ತಂಗಿಸಲು ಎಸ್.ಎಸ್. ಜೈನ ಸಂಘದ ಭವನದ ಪ್ರಾಂಗಣದಲ್ಲಿ ತಂಪು ಪಾನೀಯ ಹಾಗೂ ಮಜ್ಜಿಗೆಯ ಸೇವೆಯ ಆರವಟ್ಟಿಗೆ ಪ್ರಾರಂಭಿಸಲಾಯಿತು.
ನಗರದ ಕೋಟೆಯಲ್ಲಿರುವ 1008 ದಿಗಂಬರ ಪಾರ್ಶ್ವನಾಥ ಜೈನ ಬಸದಿಯಲ್ಲಿ 24ನೇ ತೀರ್ಥಂಕರ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು. ಶ್ರಾವಕಿಯರು ಮಹಾವೀರ ಮೂರ್ತಿಯ ಮೆರವಣಿಗೆ ನಡೆಸಿ, ಮಹಾವೀರರ ಜನ್ಮ ಕಲ್ಯಾಣ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಿದರು.ಸಂಘದ ಅಧ್ಯಕ್ಷ ಅಭಯಕುಮಾರ ಮೆಹತಾ, ಉಪಾಧ್ಯಕ್ಷ ಅಶೋಕಚಂದ ತಾಲೇಡಾ, ಗೌತಮಚಂದ ಜಾಂಗಡಾ, ಮಂತ್ರಿ ವಿಜಯ ಕುಮಾರ ಮೆಹತಾ, ಸಹ ಕಾರ್ಯಕರ್ತರಾದ ಮೇಘರಾಜ ರಾತಡಿಯಾ, ಮಹಾವೀರ ಮೆಹತಾ, ಪವನ ಕುಮಾರ ಪೋಕರ್ಣಾ, ರಿಕಬ ಕುಮಾರ ಸುರಾಣಾ, ಪ್ರವೀಣ ಕುಮಾರ ಮೆಹತಾ, ರೋಣಕ ಕುಮಾರ, ವಿನಯ ಕುಮಾರ ಇತರರಿದ್ದರು.
ಮುಖಂಡ ಜಶ್ವಂತರಾಜ್ ಜೈನ್ ಮಾತನಾಡಿ, ಯಾರಿಗೂ ಕೆಟ್ಟದ್ದು ಮಾಡದೆ ಜೀವಿಸುವುದೇ ನಿಜವಾದ ಬದುಕು. ಬದುಕು ಎಂಬುದು ಬವಣೆಯಲ್ಲ. ಅದೊಂದು ಸುಂದರ ಕ್ಷಣ. ನಲಿವಿನಿಂದ ಅದನ್ನು ಆನಂದಿಸಬೇಕು ಎಂದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಭಾವಚಿತ್ರ ಮೆರವಣಿಗೆ ಜರುಗಿತು. ಆನಂತರ ಜೈನ ಮಂದಿರದಲ್ಲಿ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಸುಭಾಷಚಂದ್ರ, ರಿಕಬಚಂದ್, ರಮೇಶಚಂದ್, ಧರ್ಮಚಂದ್, ದಿಲಿಪಚಂದ್, ಗೌತಮ್ ಚಂದ್ ಹಾಗೂ ಜೈನ್ ಮಹಿಳಾ ಮಂಡಳದ ಪ್ರಮುಖರಿದ್ದರು.