ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕಿನ ಕಸಬಾ ಹೋಬಳಿಯ ಸಿದ್ದಲಿಂಗಪುರ ಗ್ರಾಮದ ಪುರಾತನವಾದ ಶ್ರೀಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಶಿವರಾತ್ರಿ ಮುಂಜಾನೆಯಿಂದಲೇ ದೇವಸ್ಥಾನದ ಪ್ರಧಾನ ಅರ್ಚಕ ನಂದಕುಮಾರ್ ನೇತೃತ್ವದಲ್ಲಿ ಗಣಪತಿ ಪೂಜೆ ಪುಣ್ಯಾಹ ಮತ್ತು ಮೂಲ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ಹಾಗೂ ಫಲಪಂಚಾಮೃತ ಅಭಿಷೇಕಗಳು ಮತ್ತು ವಿಶೇಷವಾದ ಅಲಂಕಾರವನ್ನು ನೆರವೇರಿಸಲಾಯಿತು.
ಸಂಜೆ 6 ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ಶ್ರೀ ಸ್ವಾಮಿಯವರಿಗೆ 4 ಜಾವದ ರುದ್ರಾಭಿಷೇಕ, ರುದ್ರಪಾರಾಯಣ, ಫಲಪಂಚಾಮೃತ ಅಭಿಷೇಕ, ಬಿಲ್ವಾಷ್ಠೋತ್ತರ ಪೂಜಾದಿ ಕಾರ್ಯಗಳು ನೆರವೇರಿತು.ಲಕ್ಮೀಪುರ ಗ್ರಾಮದ ಮೋನಿಕಾ ಮತ್ತು ಜಾಹ್ನವಿ ಸಹೋದರಿಯರಿಂದ ಭರತನಾಟ್ಯ ಸೇವೆ, ನಂತರ ಸಿದ್ದಲಿಂಗಪುರದ ಮಂಗಳೂರು ಎಜುಕೇಷನ್ ಟ್ರಸ್ಟ್ ವಿದ್ಯಾಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಆನಂತರ ಬೆಳಗ್ಗೆ 6 ಗಂಟೆಯವರೆಗೆ ಅಖಂಡ ಜಾಗರಣಾ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಸ್ವಾಮಿಯವರಿಗೆ ಎಣ್ಣೆ ಮಜ್ಜನ, ವಿಶೇಷ ಪೂಜೆ, ಪಂಚಾಮೃತ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ವಿಶೇಷವಾಗಿ ಶ್ರೀ ಮಹದೇಶ್ವರ ಸ್ವಾಮಿಯವರಿಗೆ ಮಾಡಲಾಗಿದ್ದ ಫಲಪುಷ್ಪಾಲಂಕಾರದ ದರ್ಶನಗೈದು, ಭಕ್ತಾದಿಗಳು ಪುನೀತರಾದರು.ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಿದ್ದಲಿಂಗಪುರ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು, ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಮತ್ತು ಶ್ರೀ ಸಿದ್ದಪ್ಪಾಜಿಯವರನ್ನು ಕಣ್ತುಂಬಿಕೊಂಡು, ಭಕ್ತಿಯಿಂದ ಶ್ರೀ ಸ್ವಾಮಿಯವರ ದರ್ಶನಾರತಿ ಪಡೆದು, ಪ್ರಸಾದ ಸ್ವೀಕರಿಸಿ ಧನ್ಯರಾದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಯುವಕರು ಸೇರಿದಂತೆ, ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಸೇವಾ ಸಮಿತಿಯ ಸದಸ್ಯರುಗಳು ಹಾಜರಿದ್ದರು.ಮಾ.11ರಂದು ರಥೋತ್ಸವ:
ಶ್ರೀ ಪಾರ್ವತಿ ಸಮೇತ ಚಂದ್ರಮೌಳೇಶ್ವರ ಸ್ವಾಮಿಯವರ ರಥೋತ್ಸವವು ಮಾ.11 ರಂದು ರಥೋತ್ಸನ ಜರುಗಲಿದೆ.ಅಂದು ಬೆಳಗ್ಗೆ 7ಕ್ಕೆ ಶ್ರೀ ಪಾರ್ವತಿದೇವಿ ಹಾಗೂ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರಿಗೆ ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಪಂಚಾಮೃತಅಭಿಷೇಕ, ರುದ್ರಾಭಿಷೇಕ, ಗಣ ಹೋಮ, ರುದ್ರ ಹೋಮ, ಪಾರ್ವತಿ ಹೋಮ ಮತ್ತು ಬಲಿ ಪ್ರಧಾನ, ಪೂರ್ಣಾಹುತಿ ನಂತರ ಮಹಾಮಂಗಳಾರತಿ. ಬೆಳಗ್ಗೆ 11.30 ರಿಂದ 12 ಗಂಟೆಯೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ, ಶ್ರೀ ಪಾರ್ವತಿ ಸಮೇತ ಚಂದ್ರಮೌಳೇಶ್ವರ ಸ್ವಾಮಿಯವರ ರಥೋತ್ಸವ ನೆರವೇರಲಿದೆ. ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಹೀಗಾಗಿ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯವರ ಸೇವೆಯಲ್ಲಿ ಭಾಗವಹಿಸಿ, ಸ್ವಾಮಿಯವರ ಪ್ರಸಾದ ಸ್ವೀಕರಿಸಲು ಕೋರಿದೆ.