ಅರ್ಕೇಶ್ವರ ದೇಗುಲದಲ್ಲಿ ಶ್ರದ್ಧಾಭಕ್ತಿಯ ಶಿವರಾತ್ರಿ

KannadaprabhaNewsNetwork | Published : Feb 28, 2025 12:46 AM

ಸಾರಾಂಶ

ರಾಮನಗರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಗುರುವಾರ ಮುಂಜಾನೆ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಸಮಾಜ ಸೇವಕ ಭೋಜರಾಜು ಕುಟುಂಬದವರಿಂದ ಆಯೋಜಿಸಿದ್ದ ಹೋಮ, ಹವನ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ರಾಮನಗರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಗುರುವಾರ ಮುಂಜಾನೆ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಸಮಾಜ ಸೇವಕ ಭೋಜರಾಜು ಕುಟುಂಬದವರಿಂದ ಆಯೋಜಿಸಿದ್ದ ಹೋಮ, ಹವನ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಶ್ರೀ ಅರ್ಕೇಶ್ವರ ದೇವಾಲಯದಲ್ಲಿರುವ ನಾಗ ದೇವಾಲಯವನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಿ ವಿಶೇಷಪೂಜೆ ನೆರವೇರಿಸಿದ ನಂತರ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದ ಭೋಜರಾಜು, ಕಳೆದ ಹತ್ತು ವರ್ಷದಿಂದ ನಮ್ಮ ತಾಯಿಯವರ ಆಸೆಯಂತೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ, ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾ ಬಂದಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶೇಷ ಪೂಜೆ, ೮ ಸಾವಿರ ಜನರಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರುತ್ತಿದೆ. ಇದಕ್ಕೆ ಇಲ್ಲಿ ಸೇರಿರುವ ಭಕ್ತಗಣವೇ ಸಾಕ್ಷಿ ಎಂದರು.

ಶ್ರೀ ಅರ್ಕೇಶ್ವರಸ್ವಾಮಿ ಜೀರ್ಣೋದ್ಧಾರ ನಿಮಿತ್ತ ಈ ವರ್ಷ ಅಂಬಾರಿ ಮೆರವಣಿಗೆ ಬದಲು ಶ್ರೀ ವೇಣುಗೋಪಾಲಸ್ವಾಮಿ ಮತ್ತು ಶ್ರೀ ಅರ್ಕೇಶ್ವರಸ್ವಾಮಿ ದೇವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಶ್ರೀ ಕಬ್ಬಾಳಮ್ಮ ಮತ್ತು ಶ್ರೀ ಅರ್ಕೇಶ್ವರ ಸ್ವಾಮಿ ಪ್ರೇರಣೆಯಿಂದ ನಾನು ಈ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗಿದೆ. ಮುಂದಿನ ವರ್ಷದಲ್ಲಾದರೂ ದೇವಾಲಯದ ಜೀರ್ಣೋದ್ಧಾರ ಕಾರ್ಯ ಸಂಪೂರ್ಣಗೊಂಡು ಭಕ್ತರು ಪೂಜೆ ಸಲ್ಲಿಸಲು ಅನುವು ಮಾಡಿಕೊಡಿವಂತೆ ಜಿಲ್ಲಾಡತಕ್ಕೆ ಮನವಿ ಮಾಡಿದರು.

ಸಮಾಜ ಸೇವಕ, ಗಣೇಶ ಜ್ಯುವಲರ್ಸ್ ಮಾಲೀಕ ಲಕ್ಷ್ಮಣ್ ಮಾತನಾಡಿ, ಪ್ರತಿವರ್ಷ ಮಹಾಶಿವರಾತ್ರಿಯಲ್ಲಿ ಭೋಜರಾಜು ಸ್ವಂತ ಖರ್ಚಿನಲ್ಲಿ ದೇವಾಲಯದ ಪೂಜಾ ಸೇವೆ ಮತ್ತು ಭಕ್ತರಿಗೆ ಅನ್ನದಾನ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ವಿವಿಧ ಅಲಂಕಾರ ಮಾಡಲಾಗಿತ್ತು, ಆಗಮಿಸಿದ ಎಲ್ಲ ಭಕ್ತರಿಗೆ ಧಾರ್ಮಿಕ ಸಂಭ್ರಮದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಈ ವೇಳೆ ರೈಡ್ ನಾಗರಾಜು, ವೆಂಕಟೇಶ್, ಸೂರಿ, ಸ್ನೇಕ್‌ ಹರೀಶ್, ಭೋಜರಾಜು ಕುಟುಂಬ ವರ್ಗದವರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಬಾಕ್ಸ್ ....

ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ, ಶ್ರೀ ಪವಾಡ ಮುನೇಶ್ವರ ದೇವಾಲಯ, ಶ್ರೀ ಬಸವೇಶ್ವರ, ಶ್ರೀ ರೇವಣಸಿದ್ದೇಶ್ವರ, ಶ್ರೀ ಮಲ್ಲೇಶ್ವರ ದೇವಾಲಯ ಸೇರಿದಂತೆ ಎಲ್ಲ ಶಿವಮಂದಿರಗಳಲ್ಲಿ ಸರದಿಯಲ್ಲಿ ದರ್ಶನ ಪಡೆಯುವುದು ಕಂಡು ಬಂತು. ಇಡೀ ದಿನ ಪ್ರಮುಖ ಶಿವಮಂದಿರಗಳಲ್ಲಿ ಭಕ್ತರ ದಂಡು ತುಂಬಿ ತುಳುಕುತ್ತಿತ್ತು. ಜಾಗರಣೆ ನಿಮಿತ್ತ ರಾತ್ರಿ ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಹಾಗೂ ರಸಮಂಜರಿ ಕಾರ್ಯಕ್ರಮಗಳಲ್ಲಿ ಶಿವನ ಕುರಿತು ನೂರಾರು ಹಾಡುಗಳನ್ನು ಹಾಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.

ಬಾಕ್ಸ್‌...........

ಅಗ್ನಿ ಕೊಂಡೋತ್ಸವ ಸಂಪನ್ನ

ರಾಮನಗರ: ನಗರದ ವಿಜಯನಗರದಲ್ಲಿರುವ ಶ್ರೀ ಪವಾಡ ಮುನೇಶ್ವರಸ್ವಾಮಿ ದೇವರ ಅಗ್ನಿಕೊಂಡ ಮಹೋತ್ಸವ ಕರಗಧಾರಕ ಶಿವಸ್ವಾಮಿ (ಅಪ್ಪಿ) ಕೆಂಡ ತುಳಿಯುವ ಮೂಲಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ದೇವಾಲಯದಲ್ಲಿ ಕಳೆದ ಒಂದು ವಾರದಿಂದ ಹಸಿ ಕರಗ, ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಾಶಿವರಾತ್ರಿಯ ದಿನದಂದು ಎಳವಾರ, ಕೊಂಡಕ್ಕೆ ಅಗ್ನಿ ಸ್ಪರ್ಶ, ರಸಮಂಜರಿ, ಜಾತ್ರಾ ಮಹೋತ್ಸವ, ಕೊಂಡೋತ್ಸವ ಕಾರ್ಯಕ್ರಮಗಳ ಜೊತೆಗೆ ಗುರುವಾರ ಮಧ್ಯಾಹ್ನ 5 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ವಿಜೃಂಭಣೆಯಿಂದ ನೆರವೇರಿತು. ಬನ್ನಿಮಂಟಪ, ಶ್ರೀ ಶ್ರೀ ಆಭಯ ಆಂಜನೇಯ ಸ್ವಾಮಿ ವೃತ್ತ ಹಾಗೂ ವಿಜಯನಗರದ ಪ್ರಮುಖ ರಸ್ತೆಗಳಲ್ಲಿ ಅಲಂಕರಿಸಿದ್ದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಮನ ಸೆಳೆದವು.

ಕೋಟ್.................

ಶ್ರೀ ಪವಾಡ ಮುನೇಶ್ವರಸ್ವಾಮಿ ದೇವರ ಅನುಗ್ರಹ ಮತ್ತು ದೇವರ ಆಸೆಯಂತೆ ಸ್ವಾಮಿಯ ಮೊದಲ ವರ್ಷದ ಅಗ್ನಿಕೊಂಡ, ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲ ಭಕ್ತ ಸಮುದಾಯಕ್ಕೆ ದೇವರು ಸಕಲ ಅಷೈಶ್ವರ್ಯಗಳನ್ನು ಕೊಟ್ಟು ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

-ಶಿವಸ್ವಾಮಿ (ಅಪ್ಪಿ), ಕರಗಧಾರಕರು

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಶ್ರೀ ಅರ್ಕೇಶ್ವರ ದೇವಾಲಯದಲ್ಲಿರುವ ನಾಗ ದೇವಾಲಯವನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಿ ವಿಶೇಷಪೂಜೆ ನೆರವೇರಿಸಿದ ನಂತರ ಅನ್ನಸಂತರ್ಪಣೆ ಕಾರ್ಯಕ್ಕೆ ಭೋಜರಾಜ್ ಚಾಲನೆ ನೀಡಿದರು.

27ಕೆಆರ್ ಎಂಎನ್ 2.ಜೆಪಿಜಿರಾಮನಗರದ ವಿಜಯನಗರದಲ್ಲಿರುವ ಶ್ರೀ ಪವಾಡ ಮುನೇಶ್ವರಸ್ವಾಮಿ ದೇವರ ಅಗ್ನಿಕೊಂಡ ಮಹೋತ್ಸವದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ಕೆ ಶಿವಸ್ವಾಮಿ ಚಾಲನೆ ನೀಡಿದರು.

Share this article