ಕನ್ನಡಪ್ರಭ ವಾರ್ತೆ ಪಾಂಡವಪುರ
ರೈಲ್ವೆ ನಿಲ್ದಾಣದ ಸಮೀಪದ ಕಾರ್ಖಾನೆ ಮುಂಭಾಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ನೌಕರರು ಮತ್ತು ರೈತಸಂಘ ಕಾರ್ಯಕರ್ತರು ಎಂಆರ್ ನಿರಾಣಿ ಸಂಸ್ಥೆ ಆಡಳಿತ ಮಂಡಳಿ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ನಿರಾಣಿ ಅವರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿಲ್ಲ. ಕಳೆದೊಂದು ತಿಂಗಳಿನಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಅದಕ್ಕೆ ಮನ್ನಣೆ ನೀಡದೆ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ಪಿಎಸ್ ಎಸ್ ಕೆಯಲ್ಲಿ ೪೦ ವರ್ಷಗಳ ಅವಧಿಗೆ 405 ಕೋಟಿಗೆ ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಪಡೆದಿದೆ. ಸರ್ಕಾರ ಮತ್ತು ಎಂಆರ್‌ಎನ್ ಸಂಸ್ಥೆ ನಡುವೆ ನಡೆದಿರುವ ಗುತ್ತಿಗೆ ಕರಾರನಂತೆ ನಡೆದುಕೊಳ್ಳುತ್ತಿಲ್ಲ. ಕಾರ್ಖಾನೆ ಗುತ್ತಿಗೆ ಪಡೆಯುವ ವೇಳೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಕರಾರು ಏರ್ಪಟ್ಟಿದೆ. ಆದರೆ, ಅದರಂತೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಎಂಆರ್‌ಎನ್ ಸಂಸ್ಥೆ ಮುಖ್ಯಸ್ಥರೊಂದಿಗೆ ನೌಕರರ ವಿಚಾರದ ಜತೆಗೆ ಹಲವು ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನ್ಯಾಯಾಲಯ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಮಾತಿಗೂ ಮನ್ನಣೆ ಕೊಟ್ಟಿಲ್ಲ ಎಂದರು.
ಪಿಎಸ್‌ಎಸ್‌ಕೆ ಆಸ್ತಿ ಲಪಟಾಯಿಸುವ ಹುನ್ನಾರ:
ತಮ್ಮದೇ ಪ್ರತೇಕ ಬ್ಯಾಂಕ್ ತೆರೆದಿದ್ದಾರೆ. ಆ ಬ್ಯಾಂಕ್‌ನಲ್ಲಿ ಖಾತೆ ತೆರೆಯದಿದ್ದರೆ ರೈತರಿಗೆ ಪೇಮೆಂಟ್ ಮಾಡುವುದಿಲ್ಲ. ಪಿಎಸ್‌ಎಸ್‌ಕೆ ಕಾರ್ಖಾನೆ ಸಹಕಾರಿ ಕ್ಷೇತ್ರದಲ್ಲಿದ್ದಾಗ ವಿವಿಧ ಬ್ಯಾಂಕ್‌ಗಳಿಂದ ನೂರಾರು ಕೋಟಿ ರು. ಸಾಲ ಪಡೆದುಕೊಳ್ಳಲಾಗಿದೆ. ಇದನ್ನು ತೀರಿಸುವ ಯಾವುದೇ ನಿರ್ಧಾರಗಳು ಎಂಆರ್‌ಎನ್ ಸಂಸ್ಥೆಯ ಮುಂದಿಲ್ಲ. ಇದರಿಂದ ಕಾರ್ಖಾನೆ ಆಸ್ತಿ ಹರಾಜಿಗೆ ಬರಬಹುದು. ಆಗ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿ ಖಾಸಗಿಯವರ ಪಾಲಾಗಬಹುದು ಎಂಬ ಬಹುದೊಡ್ಡ ಹುನ್ನಾರ ನಡೆದಿದೆ ಎಂದು ರೈತರು ದೂರಿದರು.
ಅದಕ್ಕಾಗಿ ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಕಾರ್ಖಾನೆಯನ್ನು ವಶಕ್ಕೆ ಪಡೆದು ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದೇವೆ. ರೈತರಿಗೆ ತೊಂದರೆಯಗದಂತೆ ಕಾರ್ಖಾನೆ ಮುಂದುವರೆಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ರೈತರು ತಿಳಿಸಿದರು.