ದಿನಗೂಲಿಯ ಸ್ವಾವಲಂಬಿಯಾಗಿಸಿದ ಧರ್ಮಸ್ಥಳ ಸಂಘ

KannadaprabhaNewsNetwork |  
Published : Feb 28, 2025, 12:46 AM IST
ಅಬ್ಬಾಸ್‌ ಅಲಿ ಬದುಕು ಕಟ್ಟಿದ ಟೂರಿಸ್ಟ್ ವಾಹನ. | Kannada Prabha

ಸಾರಾಂಶ

ನನ್ನ ಎಲ್ಲ ಟೂರಿಸ್ಟ್ ವಾಹನಗಳಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ಫೋಟೋ ಹಾಕಿದ್ದೇನೆ. ನಾನು ಯಾವಾಗಲೂ ಧರ್ಮಸ್ಥಳ ಸಂಘಕ್ಕೆ ಚಿರಋಣಿ ಎಂದು ಅಬ್ಬಾಸ ಅಲಿ ಅಗಡಿ ಸ್ಮರಿಸಿದರು.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಮೈಕ್ರೋ ಫೈನಾನ್ಸ್‌, ಸ್ಮಾಲ್‌ ಫೈನಾನ್ಸ್‌ ಮತ್ತು ಸ್ವಸಹಾಯಗಳಿಂದ ಸಾಲ ಪಡೆದು ಕಿರುಕುಳಕ್ಕೊಳಗಾದ ಹಲವಾರು ನಕಾರಾತ್ಮಕ ವರದಿಗಳ ನಡುವೆ ಇಲ್ಲೊಬ್ಬರು ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಸ್ವಸಹಾಯ ಸಂಘದಿಂದ ಸಾಲ ಪಡೆದು ಅದನ್ನು ಸಕಾಲಕ್ಕೆ ತೀರಿಸಿ ಉನ್ನತಿ ಹೊಂದಿ ಇದೀಗ ಸ್ವಂತವಾಗಿ ನಾಲ್ಕು ವಾಹನ, ಎರಡು ಅಂಗಡಿ ನಡೆಸಿ ಹತ್ತಾರು ಜನಕ್ಕೆ ಉದ್ಯೋಗ ನೀಡಿ ಮಾದರಿಯಾಗಿರುವ ಸಕಾರಾತ್ಮಕ ವರದಿ ಬೆಳಕಿಗೆ ಬಂದಿದೆ..

ದಿನಗೂಲಿ ಕೆಲಸ ಮಾಡುತ್ತಿದ್ದ ₹೩೫ ಸಾವಿರ ಕೈ ಸಾಲ ಇದ್ದ ಅಬ್ಬಾಸ ಅಲಿ ಅಗಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಸಾಲ ಪಡೆಯುವ ಮೂಲಕ ಸಕಾಲಕ್ಕೆ ತೀರಿಸುತ್ತ ಈಗ ನಾಲ್ಕು ಟೂರಿಸ್ಟ್ ವಾಹನಗಳು ಹಾಗೂ ಎರಡು ಕಿರಾಣಿ ಅಂಗಡಿಗಳ ಮಾಲೀಕ. ಇದರೊಂದಿಗೆ ತರಕಾರಿ ವ್ಯಾಪಾರವೂ ಸೇರಿದೆ. ಸಂಕಷ್ಟದಲ್ಲಿ ಸಹಾಯ ಮಾಡಿದವನೇ ದೇವರು ಎನ್ನುತ್ತಾರೆ ಈ ಸಾಧಕ. ತಾಲೂಕಿನ ತಿಳವಳ್ಳಿ ಗ್ರಾಮದ ೩೬ ವರ್ಷದ ಯುವಕ ಅಬ್ಬಾಸ ಅಲಿ ೨೦೧೧ರಲ್ಲಿ ಕೈಸಾಲದ ಬಡ್ಡಿಗೆ ಬೆಂಡಾಗಿ ದುಡಿದ ದುಡಿಮೆಯಲ್ಲ ಸಾಲಕ್ಕೆ ಹೋಗಿ ಪರಿತಪಿಸುವ ಕಾಲದಲ್ಲಿ ಧರ್ಮಸ್ಥಳ ಸಂಘದ ಮೂಲಕ ₹೧೦ ಸಾವಿರ ಸಾಲ ಪಡೆದು ತೀರುವಳಿ ಮಾಡುತ್ತ ಈಗ ₹೭ ಲಕ್ಷ ಸಾಲ ಹೊಂದಿದ್ದರೂ ಸಮಾಧಾನವಿದೆ. ಯಾವುದೇ ಒತ್ತಡವಿಲ್ಲದೆ ನಿಗದಿತ ಅವಧಿಗೆ ಸಾಲ ತೀರಿಸುತ್ತ ನೆಮ್ಮದಿಯ ಜೀವನಕ್ಕೆ ಅವಕಾಶವಾಗಿದೆ. ನನ್ನದೀಗ ಸುಖಿ ಕುಟುಂಬ ಎನ್ನುತ್ತಾನೆ ಅಬ್ಬಾಸ ಅಲಿ.ಧರ್ಮಸ್ಥಳ ಸಂಘದಿಂದ ಮೊದಲು ₹೧೦ ಸಾವಿರ ಸಾಲ ಪಡೆದು ಕಿರಾಣಿ ಅಂಗಡಿ ಹಾಕಿದೆ. ನಿಗದಿತ ಅವಧಿಗೂ ಮೊದಲೇ ಸಾಲ ತೀರುವಳಿ ಮಾಡಿ ಮತ್ತೆ ₹೫೦ ಸಾವಿರ ಸಾಲ ಪಡೆದೆ. ಅದನ್ನು ತೀರುವಳಿ ಮಾಡಿ ₹೨ ಲಕ್ಷ ಸಾಲ ಮಾಡಿ ಟೂರಿಸ್ಟ್ ವಾಹನ ಖರೀದಿಸಿದೆ. ಹೀಗೆ ಬೆಳೆಯುತ್ತ ₹೫ ಲಕ್ಷದವರೆಗೆ ಸಾಲ ಪಡೆದು ಈಗ ೪ ಟೂರಿಸ್ಟ್ ವಾಹನಗಳಿವೆ. ಎರಡು ಕಿರಾಣಿ ಅಂಗಡಿಗಳು ಚೆನ್ನಾಗಿ ನಡೆಯುತ್ತಿವೆ. ೧೦ ಜನರಿಗೆ ಕೆಲಸ ಕೊಟ್ಟಿದ್ದೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದೇನೆ. ಮನೆಯವರಿಗೆ ಬೇಕಾದ ಒಡವೆ ಕೊಡಿಸಿದ್ದೇನೆ. ನೆಮ್ಮದಿಯಿಂದ ಬದುಕುತ್ತಿದ್ದೇನೆ. ಒಂದು ದೊಡ್ಡ ಟೂರಿಸ್ಟ್ ಬಸ್ ಖರೀದಿಸುವ ಹಂಬಲವಿದೆ ಎನ್ನುವ ಆಸೆ ವ್ಯಕ್ತಪಡಿಸಿದರು ಅಲಿ.ನನ್ನ ಎಲ್ಲ ಟೂರಿಸ್ಟ್ ವಾಹನಗಳಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ಫೋಟೋ ಹಾಕಿದ್ದೇನೆ. ನಾನು ಯಾವಾಗಲೂ ಧರ್ಮಸ್ಥಳ ಸಂಘಕ್ಕೆ ಚಿರಋಣಿ ಎಂದು ಸ್ಮರಿಸಿದರು.

ನನಗೆ ದುಡಿಯುವುದೆಂದರೆ ಹಬ್ಬವಿದ್ದಂತೆ. ಕಿರಾಣಿ ಅಂಗಡಿ, ಟೂರಿಸ್ಟ್ ವಾಹನ ನಡೆಸುವುದರೊಂದಿಗೆ ವರ್ಷದ ಮೂರು ತಿಂಗಳು ತರಕಾರಿ ವ್ಯಾಪಾರ ಮಾಡುತ್ತೇನೆ. ಹಾನಗಲ್ಲ ತಾಲೂಕಿನಲ್ಲಿ ಬೆಳೆದ ತರಕಾರಿಯನ್ನು ದೂರದ ಮಂಗಳೂರು ಸೇರಿದಂತೆ ಹಲವೆಡೆ ಕೊಂಡ್ಯೊಯ್ದು ಮಾರುತ್ತೇನೆ. ಇದರಿಂದ ಉತ್ತಮ ಲಾಭ ಬಂದಿದೆ ಎಂದು ತಿಳವಳ್ಳಿ ಗ್ರಾಮದ ಯುವಕ ಅಬ್ಬಾಸ ಅಲಿ ಅಗಡಿ ತಿಳಿಸಿದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌