- ನೂತನ ಅಧ್ಯಕ್ಷರಿಗೆ ಸಾಲು ಸಾಲು ಸವಾಲುಗಳು । ಲೋಕಸಭೆ- ವಿಧಾನಪರಿಷತ್ ಚುನಾವಣೆ
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರುಎರಡು ದಶಕಗಳ ಕಾಲ ಜಿಲ್ಲೆಯಲ್ಲಿ ದರ್ಬಾರ್ ನಡೆಸಿರುವ ಬಿಜೆಪಿ ನೆಲಕಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕಗೊಂಡಿದ್ದಾರೆ. ಎಚ್.ಸಿ. ಕಲ್ಮರುಡಪ್ಪ ಮೊದಲ ಅವಧಿಯಲ್ಲಿ ಒಂದೂವರೆ ವರ್ಷ, ಎರಡನೇ ಅವಧಿಯಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಮುಂದಿನ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಡಿಸೆಂಬರ್ ಕೊನೆಯ ವಾರದಲ್ಲಿ ನಡೆದಿದ್ದು, ಜಿಲ್ಲಾ ಉಸ್ತುವಾರಿ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಹಾಗೂ ಪಕ್ಷದ ಹಿರಿಯ ಮುಖಂಡರು ಬಂದು ಕಾರ್ಯ ಕರ್ತರ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರ ಆಕಾಂಕ್ಷಿಗಳ ಪಟ್ಟಿಯಲ್ಲಿ ದೇವರಾಜ್ ಶೆಟ್ಟಿ, ಪ್ರೇಮ್‌ಕುಮಾರ್, ರವೀಂದ್ರ ಬೆಳವಾಡಿ, ಕೋಟೆ ರಂಗನಾಥ್, ರಾಮಸ್ವಾಮಿ ಹೆಸರುಗಳಿದ್ದವು. ಕೊನೆಯ ಸುತ್ತಿನಲ್ಲಿ ಮೂರು ಮಂದಿಯ ಹೆಸರುಗಳಿದ್ದವು. ಇವುಗಳಲ್ಲಿ ದೇವರಾಜ್ ಶೆಟ್ಟಿ ಹೆಸರನ್ನು ಅಂತಿಮಗೊಳಿಸಲಾಗಿದೆ. ದೇವರಾಜ್ ಶೆಟ್ಟಿ ಎರಡು ಬಾರಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ನಗರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದೆ.ಆಯ್ಕೆಗೆ ಕಾರಣ:ದೇವರಾಜ್ ಶೆಟ್ಟಿ ಅವರು ಮಾಜಿ ಸಚಿವರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಮಾಜಿ ಶಾಸಕರಾದ ಡಿ.ಎಸ್. ಸುರೇಶ್, ಬೆಳ್ಳಿಪ್ರಕಾಶ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷದ ವೇದಿಕೆಯಲ್ಲಿ ಮಾತ್ರವಲ್ಲ ಹೊರಗೂ ಯಾರೊಂದಿಗೆ ನಿಷ್ಟುರ ಮಾಡಿಕೊಂಡಿಲ್ಲ, ಪಕ್ಷದ ಹಿರಿಯರು ಮಾತ್ರವಲ್ಲ, ತಳಮಟ್ಟದ ಕಾರ್ಯಕರ್ತರು ಹೇಳಿದರೆ, ಅದನ್ನು ಕೇಳುವುದನ್ನು ರೂಢಿಸಿಕೊಂಡಿದ್ದಾರೆ. ಬೇರೆ ಪಕ್ಷದವರನ್ನು ವೈಯಕ್ತಿಕವಾಗಿ ಟೀಕೆ ಮಾಡಿ, ಗೊಂದಲ ಹುಟ್ಟು ಹಾಕಿ, ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವವರಲ್ಲ.
ಸವಾಲು: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಹಲವು ಪ್ರಮುಖ ಕಾರ್ಯಕರ್ತರು ಪಕ್ಷಾಂತರ ಮಾಡಿದ್ದಾರೆ. ಬರುವ ಏಪ್ರಿಲ್ ಮಾಹೆಯಲ್ಲಿ ಲೋಕಸಭಾ ಚುನಾವಣೆ, ನಂತರದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ವಿಧಾನಪರಿಷತ್ ಚುನಾವಣೆಗಳು ನಡೆಯಲಿವೆ. ಹಾಗಾಗಿ ನೂತನ ಅಧ್ಯಕ್ಷರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಟ್ಟುಗೂಡಿಸಿ, ಪಕ್ಷವನ್ನು ಮುನ್ನಡೆಸುವ ದೊಡ್ಡ ಜವಬ್ದಾರಿ ನೂತನ ಅಧ್ಯಕ್ಷರ ಮೇಲಿದೆ.ಪೋಟೋ ಫೈಲ್ ನೇಮ್ 15 ಕೆಸಿಕೆಎಂ 5