ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು ಬುಧವಾರ ನಿವೃತ್ತಿಯಾಗಬೇಕಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಅವರಿಗೆ ಮೇ 21ರವರೆಗೆ ಆಡಳಿತ ನಡೆಸಲು ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಅಧಿಕಾರ ವಿಸ್ತರಣೆ ಪಡೆದ ಮೊದಲ ಡಿಜಿ-ಐಜಿಪಿ ಎಂಬ ಚಾರಿತ್ರಿಕ ದಾಖಲೆಗೆ ಅಲೋಕ್ ಮೋಹನ್ ಪಾತ್ರರಾಗಿದ್ದಾರೆ. ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿ ಡಿಜಿಪಿ ಅಧಿಕಾರ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ನಾಲ್ಕು ತಿಂಗಳ ಅಧಿಕಾರ ಬಯಸಿದ್ದ ಅಲೋಕ್ ಮೋಹನ್ ಅವರಿಗೆ 22 ದಿನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಡಿಜಿಪಿ ಪಟ್ಟಿಯಲ್ಲಿ ಸಂಭವನೀಯರು:ಸಿಐಡಿ ಡಿಜಿಪಿ ಡಾ। ಎಂ.ಸಲೀಂ, ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಕಾರಾಗೃಹದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಮಲ ಮಗಳ ವಿರುದ್ಧ ಚಿನ್ನ ಕಳ್ಳ ಸಾಗಣೆ ಪ್ರಕರಣದಿಂದ ರಜೆ ಮೇಲಿರುವ ಡಿಜಿಪಿ ರಾಮಚಂದ್ರ ರಾವ್, ಎಸ್‌ಸಿಆರ್‌ಬಿ ಡಿಜಿಪಿ ಪ್ರಣವ್ ಮೊಹಂತಿ, ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರು ಮುಂದಿನ ಡಿಜಿಪಿ ಹುದ್ದೆಗೆ ಶಿಫಾರಸುಗೊಂಡಿವೆ.
ಸಲೀಂ ಹೆಸರು ಮುಂಚೂಣಿ:
ಡಿಜಿ-ಐಜಿಪಿ ಹುದ್ದೆಗೆ ಎರಡು ವರ್ಷಗಳ ಸೇವಾವಧಿ ನಿಗದಿ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲೋಕ್ ಮೋಹನ್ ಅವರಿಗೆ ನೀಡಿದಂತೆ ಮುಂಬರುವ ಎಲ್ಲರಿಗೂ ಅವಕಾಶ ನೀಡಿದರೆ ಹಲವು ಅಧಿಕಾರಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಸರ್ಕಾರ ನಿಯಮ ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.