ಬಾಬಾ ಸಾಹೇಬರ ಋಣದಲ್ಲಿ ಬದುಕುತ್ತಿರುವವರು ಸಮಾಜದತ್ತ ಕಿಂಚಿತ್ತೂ ತಲೆ ಕೆಡಿಸುಕೊಳ್ಳದಿರುವುದು ಬೇಸರ
ಕನ್ನಡಪ್ರಭ ವಾರ್ತೆ ಮೈಸೂರು
ಮೌಢ್ಯದಿಂದ ಹೊರಬಂದು ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿಸಿಕೊಟ್ಟಿರುವ ಸತ್ಯದ ಮಾರ್ಗದಲ್ಲಿ ನಡೆಯಲು ಏಕೆ ಹಿಂಜರಿಯುತ್ತೀರಾ, ಬಾಬಾ ಸಾಹೇಬರು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿರುವ ಮೀಸಲಾತಿ ಬೇಕು, ಆದರೆ ಅವರು ತೋರಿಸಿದ ಧಮ್ಮದ ಮಾರ್ಗ ಬೇಡವೇ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿ ಆಯೋಜಿಸಿದ್ದ ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೌದ್ಧಧರ್ಮ ದೀಕ್ಷಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬಾಬಾ ಸಾಹೇಬರ ಋಣದಲ್ಲಿ ಬದುಕುತ್ತಿರುವವರು ಸಮಾಜದತ್ತ ಕಿಂಚಿತ್ತೂ ತಲೆ ಕೆಡಿಸುಕೊಳ್ಳದಿರುವುದು ಬೇಸರದ ಸಂಗತಿ. ಅವಕಾಶವಾದಿಗಳು ಮತ್ತು ಸಮಯ ಸಾಧಕರಿಂದ ಈ ಸಮಾಜಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಜಾತಿ ವ್ಯವಸ್ಥೆ ಇಂದು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದು, ಮನುಷ್ಯ ಮನುಷ್ಯರನ್ನು ಪ್ರೀತಿಸುವ ಬದಲು ಜಾತಿಯಿಂದಲೇ ಎಲ್ಲವನ್ನು ಅಳೆಯಲಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಪ್ರಾಣಿ ಪಕ್ಷಿಗಳಿಗೆ ಜಾತಿ ಇರುತ್ತದೆ. ಪ್ರಾಣಿಗಳ ಹೆಜ್ಜೆ ಗುರುತು ಬೇರೆ ಬೇರೆ ಇರುತ್ತವೆ. ಇದರಿಂದ ಇಂತಹ ಪ್ರಾಣಿಯ ಹೆಜ್ಜೆ ಗುರುತು ಎಂದು ಹೇಳಬಹುದು. ಆದರೆ, ಮನುಷ್ಯರ ಹೆಜ್ಜೆ ಗುರುತುಗಳು ಒಂದೇ ಅಲ್ಲವೇ. ಇದರಲ್ಲಿ ಹೇಗೆ ಜಾತಿ ಹುಡುಕುತ್ತಿರಾ? ನಮ್ಮೊಳಗಿನ ಅಜ್ಞಾನದಿಂದ ಜಾತಿಯ ಬೇರು ಇನ್ನೂ ಬೇರೂರಿದೆ ಎಂಬ ವೈಜ್ಞಾನಿಕ ಸತ್ಯವನ್ನು ಜಗತ್ತಿಗೆ ಸಾದರಪಡಿಸಿದ ಮಹಾನ್ ಜ್ಞಾನಿ ಗೌತಮ ಬುದ್ಧರು ಎಂದು ಅವರು ಹೇಳಿದರು.ಯಾವುದೇ ಆಚರಣೆಗಳು ಮನೆಯಿಂದ ಆರಂಭವಾಗುತ್ತವೆ. ಆದ್ದರಿಂದ ಇಂದಿನ ಮಕ್ಕಳಿಗೆ ಬೌದ್ಧ ಧಮ್ಮದ ಸಂಸ್ಕಾರವನ್ನು ಕಲಿಸುವ ಕೆಲಸವಾಗಬೇಕು. ಬೌದ್ಧ ಧರ್ಮದ ಸಂಸ್ಕಾರ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವುದಿಂದಲೇ ವಿಶ್ವಾದ್ಯಂತ ಇಂದು ಹರಡಿದೆ. ಇತ್ತೀಚಿನ ದಿನಗಳಲ್ಲಿ ಅರಿವು, ಪ್ರೀತಿ ಕಡಿಮೆಯಾಗುತ್ತಿದೆ. ಪ್ರೀತಿ ಮತ್ತು ಪ್ರಜ್ಞೆ ಕಡಿಮೆಯಾದಲ್ಲಿ ಅಜ್ಞಾನ ಮತ್ತು ಅಹಂಕಾರ ಬೇರೂರುತ್ತದೆ. ನಾವು ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಇದು ತನ್ನಿಂದ ದೂರವಾಗುತ್ತದೆ ಎಂದು ಅವರು ತಿಳಿಸಿದರು.ಇದೇ ವೇಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹಾಗೂ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ನೂತನ ನಿರ್ದೇಶಕರನ್ನು ಸನ್ಮಾನಿಸಲಾಯಿತು.ಸಾಹಿತಿ ಪ್ರೊ. ರಹಮತ್ ತರೀ ಕೆರೆ, ಬೆಂಗಳೂರು ಯೋಜನಾ ಇಲಾಖೆಯ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಎಂ. ಸಾವಕಯ್ಯ, ನಿವೃತ್ತ ಎಂಜಿನಿಯರ್ ಆರ್. ನಟರಾಜ್, ಮಾಜಿ ಮೇಯರ್ ಪುರುಷೋತ್ತಮ್, ರಾಜು ಹಂಪಾಪುರ, ಪುಟ್ಟಸ್ವಾಮಿ, ರಾಜಮ್ಮ, ಬಿ. ಗಾಯತ್ರಿದೇವಿ, ಕೆ.ಎಂ. ಪುಟ್ಟು, ಎಂ.ಕೆ. ದಾಸ್, ಬಿ. ಬೋರಯ್ಯ, ಎಂ. ಬಸವರಾಜು, ನಿಸರ್ಗ ಸಿದ್ದರಾಜು, ಪಿ. ನಿರಂಜನ್, ಕೇಶವಯ್ಯ, ಸಣ್ಣಯ್ಯ, ಲಿಂಗಣ್ಣಯ್ಯ, ಅಹಿಂದ ಜವರಪ್ಪ, ಡಾ.ಎಚ್.ಎಲ್. ವೆಂಕಟೇಶ್, ಎಸ್. ಗೋಪಾಲ್, ರಮೇಶ್, ಬಾಲಕೃಷ್ಣ, ಡಾ. ಪ್ರೇಮ್ ಕುಮಾರ್, ಗಂಗಾಧರ್, ಕೆ. ಮಹದೇವಯ್ಯ, ಎಂ. ರುದ್ರಯ್ಯ, ಡಾ. ಮಂಗಳಮೂರ್ತಿ, ಡಾ. ಚನ್ನಕೇಶವಮೂರ್ತಿ, ತುಂಬಲ ರಾಮಣ್ಣ, ಡಿ. ಮಹದೇವಯ್ಯ, ರೂಪೇಶ್, ವಿಜಯ್, ವಿಶಾಲ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.