ಪ್ರಬುದ್ಧ ಭಾರತ ನಿರ್ಮಾಣಕ್ಕೆ ಧಮ್ಮ ದೀಕ್ಷೆ ಅಗತ್ಯ

KannadaprabhaNewsNetwork |  
Published : Oct 09, 2026, 02:30 AM IST
ಕಂಪ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಯ ಅಂಗವಾಗಿ ನಾಗಪುರದ ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪೂಜ್ಯ ಝೆನ್ ಮಾಂಕ್ ಡಾ. ಶಾಕು ಬೋಧಿ ಧಮ್ಮ ಮಾತನಾಡಿದರು. ಸುಗ್ಗೇನಹಳ್ಳಿ ರಮೇಶ್, ಚನ್ನಬಸಪ್ಪ, ವಸಂತರಾಜ ಕಹಳೆ, ಸಿದ್ದಣ್ಣ ಪರಮೇಶ್ವರ ಇತರರಿದ್ದರು. | Kannada Prabha

ಸಾರಾಂಶ

ಸಮಾಜದಲ್ಲಿರುವ ಎಲ್ಲ ಪ್ರಜೆಗಳನ್ನು ಸಮಾನತೆ, ನ್ಯಾಯ ಮತ್ತು ಕರುಣೆಯ ದೃಷ್ಟಿಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು.

ಕಂಪ್ಲಿ: ಸಂವಿಧಾನ ಮತ್ತು ಬೌದ್ಧ ಧಮ್ಮ ಮಾನವೀಯ ಮೌಲ್ಯ ಸಮಾಜ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಲು ಆಸಕ್ತರು ಮುಂದೆ ಬರಬೇಕು ಎಂದು ನಾಗಪುರದ ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪೂಜ್ಯ ಝೆನ್ ಮಾಂಕ್ ಡಾ. ಶಾಕು ಬೋಧಿ ಧಮ್ಮ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಗುರುವಾರ ಆಗಮಿಸಿದ್ದ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಎಲ್ಲ ಪ್ರಜೆಗಳನ್ನು ಸಮಾನತೆ, ನ್ಯಾಯ ಮತ್ತು ಕರುಣೆಯ ದೃಷ್ಟಿಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೌಲ್ಯಗಳ ಆಧಾರದ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ಧಮ್ಮವನ್ನು ಪುನರುಜ್ಜೀವನಗೊಳಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಿಸುವ ಸಂಕಲ್ಪ ಹೊಂದಿದ್ದರು. ಅವರ ಆಶಯ ಸಾಕಾರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಈ ನಿಟ್ಟಿನಲ್ಲಿ ನ. 1ರಂದು ಸುಮಾರು ಐದು ಲಕ್ಷ ಉಪಾಸಕ, ಉಪಾಸಿಕೆಯರು ಬೌದ್ಧ ಧಮ್ಮದೀಕ್ಷೆ ಸ್ವೀಕರಿಸಲಿದ್ದಾರೆ. ಕಂಪ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಿ ಧಮ್ಮ ದೀಕ್ಷೆ ಸ್ವೀಕರಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾಧ್ಯಕ್ಷ ಸುಗ್ಗೇನಹಳ್ಳಿ ರಮೇಶ್ ಮಾತನಾಡಿ, ಅ. 5ರಿಂದ ಆರಂಭಗೊಂಡಿರುವ ಧಮ್ಮ ಜನಜಾಗೃತಿ ಯಾತ್ರೆ ರಾಜ್ಯದ ವಿವಿಧೆಡೆ ಸಂಚರಿಸಿ ನ. 1ರಂದು ಸನ್ನತಿಯಲ್ಲಿ ಸಮಾರೋಪಗೊಳ್ಳಲಿದೆ. ಸನ್ನತಿಯು ಬೌದ್ಧ ಪರಂಪರೆಯೊಂದಿಗೆ ನಂಟು ಹೊಂದಿರುವ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವದ ತಾಣವಾಗಿದ್ದು, ಅದರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಷಾ. ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ ಮಾತನಾಡಿ, ಆಧುನಿಕ ಭಾರತದ ನಿರ್ಮಾಣದಲ್ಲಿ ಬೌದ್ಧ ಧಮ್ಮದ ಮಾನವೀಯ ಮೌಲ್ಯಮಹತ್ವದ ಪಾತ್ರ ವಹಿಸಿವೆ. ಯುವಜನರು ಸಮಾನತೆ, ಕರುಣೆ, ಸಹಬಾಳ್ವೆ ಹಾಗೂ ಮಾನವೀಯತೆಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಚನ್ನಬಸಪ್ಪ,ವಸಂತರಾಜ ಕಹಳೆ, ಬಾವಿಕಟ್ಟೆ ಚನ್ನಬಸವ, ವಿರುಪಾಕ್ಷಿ ರಾಮಸಾಗರ, ರವಿ ಮಣ್ಣೂರು, ಬೌದ್ಧ ಸಂಘದ ಭಿಕ್ಕುಗಳು, ಉಪಾಸಕರು ಹಾಗೂ ಉಪಾಸಿಕೆಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಗೆ ಪರಿಗಣಿಸಿ
ಗಾಂಧಿ ತತ್ವ ಅನುಷ್ಠಾನವೇ ನಿಜವಾದ ಗೌರವ