ಪರಶಿವಮೂರ್ತಿ ಮಾಟಲದಿನ್ನಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕನಗೌಡ ಯಮನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಮಹಾಲೇಖಪಾಲರ (ಎಜಿ) ಕಚೇರಿ ತಂಡ ಸೆ. 28ರಂದು ಬಿಇಒ ಕಚೇರಿಯಲ್ಲಿ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದಾಗ ಹಲವು ದಾಖಲೆಗಳು ಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದೆ. ಒಟ್ಟು 135 ಕಡತಗಳನ್ನು ಪರಿಶೀಲನೆಗೆ ಕೇಳಲಾಗಿತ್ತು. ಆದರೆ ಕೇವಲ 45 ಕಡತಗಳ ದಾಖಲೆಗಳನ್ನು ಮಾತ್ರ ನೀಡಲಾಗಿದ್ದು, ಉಳಿದ 90 ಕಡತಗಳಿಗೆ ಸಂಬಂಧಿಸಿದ ವೋಚರ್‌ಗಳು ಮತ್ತು ಇತರ ದಾಖಲೆಗಳು ಲಭ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.₹69,89,320 ಲಕ್ಷ ವರ್ಗಾವಣೆ ಆರೋಪ: ಬಿಇಒ ಉಮಾದೇವಿ ಬಸಾಪುರ ಅವರು ಕುಷ್ಟಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ, ಜಿಪಿಎಫ್, ಡಿಎ ಬಾಕಿ ಸೇರಿದಂತೆ ವಿವಿಧ ಬಿಲ್‌ಗಳ ಹಣವನ್ನು ನಿಯಮದಂತೆ ಪಾವತಿಸದೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಮಾನತು ಆದೇಶದಲ್ಲಿ ₹74.04 ಲಕ್ಷ ಉಲ್ಲೇಖ: ಇತ್ತ ಕನಕನಗೌಡ ಸೇರಿದಂತೆ ಶಿವರುದ್ರಪ್ಪ ಬಂಡಿ, ಪೂಜಾ ಬಂಡಿ, ಬಸಮ್ಮ ಬಂಡಿ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹74,04,156 ಜಮೆಯಾಗಿರುವುದು ಕಂಡುಬಂದಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅಮಾನತು ಆದೇಶ: ಸರ್ಕಾರಿ ಹಣದ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆಯ ಕೊಪ್ಪಳ ಉಪನಿರ್ದೇಶಕ ಹಾಗೂ ಶಿಸ್ತು ಪ್ರಾಧಿಕಾರಿ ಅನಂತಕುಮಾರ ಎ.ಎಸ್. ಅವರು ಅ. 6ರಂದು ಕನಕನಗೌಡ ಅವರನ್ನು ಅಮಾನತುಗೊಳಿಸಿದ್ದಾರೆ.
ಮಾಹಿತಿ ಸಿಕ್ಕಿಲ್ಲ: ಅಡಿಟ್ ಮಾಡಿದ ಮೇಲೆ ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು ಅಕ್ರಮದಲ್ಲಿ ಭಾಗಿಯಾದ ಕಚೇರಿಯ ದ್ವಿದಸ ಕನಕನಗೌಡ ವಿರುದ್ಧ ಈಗಾಗಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆಯ ನಂತರ ಎಲ್ಲವು ತಿಳಿಯಲಿದೆ. ಈ ಕುರಿತು ಉಪಖಜಾನೆಯಲ್ಲಿಯೂ ವಿಚಾರಿಸಲಾಗಿದ್ದು, ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪುರ ಹೇಳಿದರು.