ಜನಹಿತವನ್ನು ನಿರ್ಲಕ್ಷಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಆಡಳಿತ ನೀಡಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಸೋಮವಾರ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು

ಕನ್ನಡಪ್ರಭ ವಾರ್ತೆ ಗೋಕಾಕ

ಜನಹಿತವನ್ನು ನಿರ್ಲಕ್ಷಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಆಡಳಿತ ನೀಡಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಸೋಮವಾರ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ನಗರದ ಶಾಸಕರ ಕಚೇರಿಯಿಂದ ಬಸವೇಶ್ವರ ವೃತ್ತದವರೆಗೆ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ಬಳಿಕ ತಹಸೀಲ್ದಾರ್‌ರ ಮೂಲಕ ಮನವಿ ಮಾಡಿದರು.

ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, ಸರಕಾರ ಕಳೆದ ಮೂರುವರೆ ವರ್ಷಗಳಿಂದ ರಾಜ್ಯದ ಜನರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರು ಹೇಳಿಕೊಂಡು ಹಾಲಿನದರ ಏರಿಕೆ ಮಾಡಿ, ದರ ಏರಿಕೆಯ ಮೊತ್ತವನ್ನು ರೈತರಿಗೆ ನೀಡದೆ ಹಾಲು ಉತ್ಪಾದಕರ ಮೇಲೆ ಬರೆ ಏಳೆಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಸೌಲಭ್ಯಗಳ ಶುಲ್ಕವನ್ನು ಏರಿಸಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಬರಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿಲ್ಲ. ರೈತರು ಸಾರ್ವಜನಿಕರು ನೀರಿಗಾಗಿ ಪರದಾಡುವ ದುಸ್ಥಿತಿ ರಾಜ್ಯದಲ್ಲಿ ಎದುರಾಗಿದೆ. ಸರಕಾರಕ್ಕೆ ಜನರ ಹಾಗೂ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕಳೆದ ಕೆಲವು ದಿನಗಳಿಂದ ಆಶಾ ಕಾರ್ಯಕರ್ತೆಯರು ಗೌರವ ಧನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರ ಭರವಸೆ, ಘೋಷಣೆಗಳಿಗೆ ಸೀಮಿತಗೊಳಿಸಿದ್ದು, ಜನಸೇವೆಯನ್ನು ಕಡೆಗಣಿಸಿ ರಾಜ್ಯವನ್ನು ದಿವಾಳಿ ಮಾಡಲಾಗುತ್ತಿದೆ. ಹೀಗಾಗಿ, ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದರು.ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರದ ಮೇಲೆ ಶೇ.40 ಸರಕಾರ ಎಂದು ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ವಾಲ್ಮೀಕಿ ಹಗರಣ, ಮುಡಾ ಹಗರಣ ಸೇರಿ ಸಾಲು ಸಾಲು ಹಗರಣಗಳನ್ನು ನಡೆಸುತ್ತ ಹಗರಣಗಳಲ್ಲಿ ಪ್ರತ್ಯಕ್ಷವಾಗಿ ಕಾಂಗ್ರೆಸ್ ಸರಕಾರ ಭಾಗಿಯಾಗಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುಖಂಡರಾದ ಲಕ್ಷ್ಮಣ ತಪಸಿ, ಪ್ರಮೋದ ಜೋಶಿ, ಸುರೇಶ ಸನದಿ, ಹನಮಂತ ದುರ್ಗನ್ನವರ, ಶಶಿಧರ ದೇಮಶೆಟ್ಟಿ, ಪ್ರಕಾಶ ಮುರಾರಿ, ಬಸವರಾಜ ಆರೇನ್ನವರ, ಬಸವರಾಜ ಹಿರೇಮಠ, ಈರಣ್ಣ ಅಂಬಲಿ, ಜಯಾನಂದ ಹುಣಚ್ಯಾಳ, ಮಹಾಲಿಂಗ ಹಿರೇಹಟ್ಟಿ, ಶ್ರೀರಂಗ ನಾಯ್ಕ, ಶಕೀಲ ಧಾರವಾಡಕರ, ಪ್ರಭಾಕರ ಚೌವ್ಹಾನ, ಅಡಿವೆಪ್ಪ ಕಿತ್ತೂರ, ಲಕ್ಕಪ್ಪ ತಹಶೀಲದಾರ, ಕಿರಣ ಡಮಾಮಗರ, ಗೀತಾ ಜರತಾರಕರ, ಶ್ರೀದೇವಿ ತಡಕೋಡ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.