ಶಿಕ್ಷಣವು ಕೇವಲ ಪ್ರಮಾಣಪತ್ರಗಳಿಗೆ ಸೀಮಿತವಾಗದೇ, ಉತ್ತಮ ಜ್ಞಾನ ಮತ್ತು ಕೌಶಲ್ಯಗಳನ್ನು ರೂಪಿಸುವ ಸಾಧನವಾಗಬೇಕು. ಶಿಕ್ಷಣದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ. ಉನ್ನತ ಶಿಕ್ಷಣದಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕಿ ಪ್ರೊ.ಶಾಂತಾದೇವಿ.ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿಕ್ಷಣವು ಕೇವಲ ಪ್ರಮಾಣಪತ್ರಗಳಿಗೆ ಸೀಮಿತವಾಗದೇ, ಉತ್ತಮ ಜ್ಞಾನ ಮತ್ತು ಕೌಶಲ್ಯಗಳನ್ನು ರೂಪಿಸುವ ಸಾಧನವಾಗಬೇಕು. ಶಿಕ್ಷಣದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ. ಉನ್ನತ ಶಿಕ್ಷಣದಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕಿ ಪ್ರೊ.ಶಾಂತಾದೇವಿ.ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಮಹಿಳೆಯರು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರಲು ಶಿಕ್ಷಣ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ನಿರಂತರವಾಗಿ ಶ್ರಮಿಸುತ್ತಿದೆ. ಈ ಭಾಗದ ಮಹಿಳೆಯರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಬಲೀಕರಣ ಹೊಂದಲು ಸಾಧ್ಯವಿದೆ ಎಂದರು.ವಿದ್ಯಾರ್ಥಿನಿಯರು ಗ್ರಂಥಾಲಯದ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಪುಸ್ತಕಗಳು, ಲೇಖನಗಳು ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ರಾಜ್ಯಶಾಸ್ತ್ರ ವಿಷಯದ ಅಧ್ಯಯನವು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಿದೆ. ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ರಾಜ್ಯಾದ್ಯಂತ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಲಕ್ಷ್ಮೀದೇವಿ.ವೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕಮಹಾದೇವಿಯವರ ಆದರ್ಶ ಮತ್ತು ಪ್ರೇರಣೆ ವಿಶ್ವವಿದ್ಯಾನಿಲಯಕ್ಕೆ ಮಾರ್ಗದರ್ಶನವಾಗಿದೆ. ಜ್ಞಾನ ಸಂಪಾದನೆಯ ಮೂಲಕ ಮಹಿಳೆಯರು ಸಬಲೀಕರಣ ಹೊಂದಲು ಸಾಧ್ಯ. ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಬೇಕು. ರಾಜ್ಯಶಾಸ್ತ್ರ ವಿಷಯದ ಅಧ್ಯಯನವು ಮಹಿಳೆಯರ ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡಿಸುತ್ತದೆ. ಸಂವಿಧಾನದ ಪೀಠಿಕೆಯನ್ನು ಅರ್ಥೈಸಿಕೊಂಡು ಅದರ ಆಶಯಗಳಿಗೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಾಪಕ ಡಾ.ಯಲ್ಲಪ್ಪ ಕೊಂಬಿನೂರು, ವೀರೇಶ ಗಬ್ಬೂರ, ಸಿಬ್ಬಂದಿಯರಾದ ಮೈರುನ್ನಿಸಾ ಸುತಾರ, ಶಂಕರ ಕಾದ್ರೊಳ್ಳಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮಂಗಲಾ ಹಡಪದ ನಿರೂಪಿಸಿದರು. ಸುಸ್ಮಿತ ಗುಂಜುಟಗಿ ಸ್ವಾಗತಗೀತೆ ಹಾಡಿದರು. ಪಲ್ಲವಿ ಕೋಟಿ ಸಂವಿಧಾನದ ಪೀಠಿಕೆ ಬೋಧಿಸಿದರು. ವಹಿದಾ ಇನಾಮದಾರ ಸ್ವಾಗತಿಸಿದರು. ಭಾರತಿ ಮುಕಿಹಾಳ ಪರಿಚಯಿಸಿದರು. ಭಾಗ್ಯಶ್ರೀ ದೊರೆ ವಂದಿಸಿದರು.ಉತ್ತರ ಕರ್ನಾಟಕದ ಮಹಿಳೆಯರು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರಲು ಶಿಕ್ಷಣ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ನಿರಂತರವಾಗಿ ಶ್ರಮಿಸುತ್ತಿದೆ. ಈ ಭಾಗದ ಮಹಿಳೆಯರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಬಲೀಕರಣ ಹೊಂದಲು ಸಾಧ್ಯವಿದೆ.

-ಪ್ರೊ.ಶಾಂತಾದೇವಿ.ಟಿ, ನಿರ್ದೇಶಕಿ, ಐಕ್ಯೂಎಸಿ ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ.