ಅಂಕೋಲಾ: ಕ್ಯಾನ್ಸರ್ ಪೀಡಿತರಾಗಿ ಮೃತಪಟ್ಟ ಪತಿಯ ಕುಟುಂಬಕ್ಕೆ ಬಂದ ಪರಿಹಾರದ ಹಣದಲ್ಲಿ ಮತ್ತೊಬ್ಬ ಕ್ಯಾನ್ಸರ್ ಪೀಡಿತನ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆ ಎಲ್ಲರ ಗಮನ ಸೆಳೆದಿದೆ.
ಕಳೆದೊಂದು ವರ್ಷದ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟ ಹಟ್ಟಿಕೇರಿಯ ವೆಂಕಟರಮಣ (ರವಿ) ನಾಯ್ಕ ಅವರ ಕುಟುಂಬಕ್ಕೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ವಿಶೇಷ ಪಯತ್ನದಿಂದ ಲೋಕೊಪಯೋಗಿ ಇಲಾಖೆಯ ಗುತ್ತಿಗೆದಾರರ ಕ್ಷೇಮ ನಿಧಿಯಿಂದ ₹10 ಲಕ್ಷ ಪರಿಹಾರ ದೊರೆತಿತ್ತು. ಆದರೆ, ತಮ್ಮ ಕುಟುಂಬಕ್ಕೆ ಬಂದ ಈ ಪರಿಹಾರದ ಹಣವನ್ನು ಕೇವಲ ಸ್ವಂತ ಬಳಕೆಗೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ಮತ್ತೊಂದು ಕುಟುಂಬದ ನೆರವಿಗೆ ಬಳಸುವ ಮನಸ್ಸು ರಕ್ಷಿತಾ ಅವರಲ್ಲಿ ಮೂಡಿದೆ. ಅದರಂತೆ ಮಾಧವ ನಾಯಕರ ಸಹಾಯ ಪಡೆದು ಕಸಬಾಕೇಣಿಯ ಕ್ಯಾನ್ಸರ್ ಪೀಡಿತ ಶುಭದೀಪ ಸಂತೋಷ ನಾಯ್ಕ ಅವರ ಮನೆಗೆ ತೆರಳಿ ₹ 25 ಸಾವಿರ ಆರ್ಥಿಕ ನೆರವು ನೀಡಿ, ಚಿಕಿತ್ಸೆಗೆ ಆಸರೆಯಾಗಿದ್ದಾರೆ.
ಬಡತನದಲ್ಲಿರುವ 35 ವರ್ಷದ ಶುಭದೀಪ ಸಂತೋಷ ನಾಯ್ಕ ಲಿಂಫೋಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅವರಿಗೆ ರಕ್ಷಿತಾ ಅವರು ಧೈರ್ಯ ತುಂಬಿ, ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಕುಟುಂಬಕ್ಕೆ ಬಂದ ಪರಿಹಾರದ ಹಣದಲ್ಲೇ ಮತ್ತೊಬ್ಬ ಕ್ಯಾನ್ಸರ್ ಪೀಡಿತನ ಚಿಕಿತ್ಸೆಗೆ ನೆರವು ನೀಡಿದ್ದಾರೆ.ಈ ವೇಳೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ನಿತ್ಯಾನಂದ ನಾಯ್ಕ, ಗುರುದಾಸ ನಾಯ್ಕ ಉಪಸ್ಥಿತರಿದ್ದರು. ಶುಭದೀಪ ನಾಯ್ಕ ಅವರ ಚಿಕಿತ್ಸೆಗೆ ಕ್ರೂಗರ್ ಫೌಂಡೇಷನ್, ಗುತ್ತಿಗೆದಾರ ಸಂತೋಷ ನಾಯ್ಕ ಕೇಣಿ, ನಿತ್ಯಾನಂದ ನಾಯ್ಕ ಹಟ್ಟಿಕೇರಿ ಹಾಗೂ ಉತ್ತರ ಕನ್ನಡ ಎಮರ್ಜೆನ್ಸಿ ಹಣ ಬೆಂಬಲ ಗ್ರೂಪ್ ಸೇರಿದಂತೆ ಹಲವರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೇವೆ ಎನ್ನುವುದು ಸ್ವಾರ್ಥದ ಸುಳಿಗೆ ಬಲಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಕ್ಷಿತಾ ನಾಯ್ಕ ಅವರು ತಮ್ಮ ನೋವಿನ ನಡುವೆಯೂ ಆರ್ಥಿಕ ಸಹಾಯ ಮಾಡಿರುವುದು ಹೆಮ್ಮೆ ತಂದಿದೆ. ಹಾಗೆ ಸಹೃದಯಿಗಳು ಶುಭದೀಪ ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಹೃದಯ ವೈಶಾಲ್ಯತೆ ಮರೆಯುವಂತಾಗಲಿ ಎಂದು ಕಾರವಾರ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ತಿಳಿಸಿದ್ದಾರೆ.