ಕನ್ನಡಪ್ರಭ ವಾರ್ತೆ ನಾಪೋಕ್ಲು
ಮನುಷ್ಯನನ್ನು ಮೃಗತ್ವ ದಿಂದ ಮಾನವತೆಯೆಡೆಗೆ, ಮಾನವತೆಯಿಂದ ದೈವತ್ವದೆಡೆಗೆ ಕರೆದೊಯ್ಯುವ ಶಕ್ತಿಯೇ ಧರ್ಮಎಂದು ಉಪನ್ಯಾಸಕ, ಸಂಸ್ಕೃತಿ ಚಿಂತಕ ಪಟ್ಟಡ ಶಿವಕುಮಾರ್ ಅಭಿಪ್ರಾಯ ಪಟ್ಟರು.
ಅವರು ದೇವರಕೊಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮನುಷ್ಯನಲ್ಲಿ ಮಾನವತೆಯನ್ನು ಮೂಡಿಸಿ, ಅವನನ್ನು ದೈವತ್ವಾದೆಡೆಗೆ ಕರೆದೊಯ್ಯುವ ಶಕ್ತಿಯೇ ಧರ್ಮ. ಆದರೆ ಮನುಷ್ಯನನ್ನು ರಾಕ್ಷಸತ್ವದ ಕಡೆಗೆ ಕೊಂಡೊಯ್ಯುವುದು ಮತಾಂಧತೆ ಎಂದು, ಹಿಂದೂ ಧರ್ಮ ಸಕಲ ಜೀವಿಗಳಲ್ಲಿ ಹಾಗೂ ಸಮಸ್ತ ಪ್ರಕೃತಿಯಲ್ಲಿ ದೇವರನ್ನು ಕಾಣುವುದರಿಂದ ಯಾರ ನಾಶಕ್ಕೂ ಪ್ರಯತ್ನಿಸುವುದಿಲ್ಲ. ಸರ್ವೆಜನ ಸುಖಿನೋ ಭವಂತು, ವಸುದೈವ ಕುಟುಂಬಕಂ ಇದು ಹಿಂದೂ ಧರ್ಮದ ತತ್ತ್ವ. ಆದರೆ ಅಧರ್ಮವನ್ನು ಅಧರ್ಮದಿಂದಲೇ ನಾಶ ಮಾಡ ಬಹುದು ಎಂಬುದನ್ನು ನಮ್ಮ ಪುರಾಣಗಳು ಪ್ರತಿಬಿಂಬಿಸಿವೆ ಎಂದರು.ಹಿಂದೂ ಧರ್ಮ ನಿರ್ದಿಷ್ಟ ದಿನಾಂಕದಿಂದ, ನಿರ್ದಿಷ್ಟ ವ್ಯಕ್ತಿಗಳಿಂದ ಜನ್ಮ ತಳೆದಿಲ್ಲ, ಈ ಸೃಷ್ಟಿಯ ಜೊತೆಯಲ್ಲೇ ಉಗಮಗೊಂಡಿರುವ ಸನಾತನ ಧರ್ಮ ಸೃಷ್ಟಿ ಇರುವವರೆಗೆ ಶಾಶ್ವತವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಹಿಂದೂ ಧರ್ಮ ತನ್ನ ಆಚರಣೆಗಳನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲ, ಆದರೂ ಕೆಲವರು ಸಾಮಾಜಿಕ ದೋಷಗಳನ್ನು ಹಿಂದೂ ಧರ್ಮದ ಮೇಲೆ ಆರೋಪಿಸಿ, ಹೀಗಳೆಯುವುದರ ಬಗ್ಗೆ ಖೇದ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬೆಳ್ಯನ ರಾಘವೇಂದ್ರ ಮಾತನಾಡಿ, ವೈದ್ಯರು, ಎಂಜಿನಿಯರು ಸಹ ತಮ್ಮ ಕೆಲಸಗಳ ಯಶಸ್ಸಿಗಾಗಿ ದೇವರನ್ನು ಪ್ರಾರ್ಥಿಸುತ್ತೇವೆ, ಪ್ರತಿಯೊಬ್ಬರೂ ತಮ್ಮ ಪ್ರಯತ್ನದೊಂದಿಗೆ ದೈವಬಲವನ್ನು ನಂಬಬೇಕು ಎಂದು ಕರೆನೀಡಿದರು.
ಮತ್ತೊಬ್ಬ ಅತಿಥಿ ವಕೀಲ ಪುಂಡರೀಕ ಮಾತನಾಡಿ, ನಾವು ಕೆಲಸ ಆರಂಭಿಸುವ ಮೊದಲು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ. ನಮ್ಮ ಪ್ರತಿಯೊಂದು ಕೆಲಸದಲ್ಲಿ ದೇವರ ನಂಬಿಕೆ ಹಾಸು ಹೊಕ್ಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದೆ ವಿ ಎಸ್ ಎಸ್ ಎನ್ ಅಧ್ಯಕ್ಷ ಹಾಗು ಯುವ ನಾಯಕ ಅಗೋಲಿಕಜೆ ಧನಂಜಯ ವಂದಿಸಿದರು.
ವೇದಿಕೆಯಲ್ಲಿ ಸಂಪಾಜೆ ಠಾಣಾಧಿಕಾರಿ ಸುಂದರ ಸುವರ್ಣ, ಜೋಡುಪಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಕೇವಳ, ಮಾಜಿ ಯೋಧ ಜೋಡುಪಾಲದ ಉಮೇಶ್ ಉಪಸ್ಥಿತರಿದ್ದರು. ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಯಶೋಧರ ಸ್ವಾಗತಿಸಿದರು. ವಿಠಲ ಕಾರ್ಯಕ್ರಮ ನಿರೂಪಿಸಿ ಧನಂಜಯ ವಂದಿಸಿದರು.