ದಸರಾ ಹಬ್ಬದಲ್ಲಿ ಆಯುಧ ಪೂಜೆ ಸೇರಿದಂತೆ ಇನ್ನಿತರೆ ಪೂಜಾ ಕಾರ್ಯಕ್ಕೆ ಹಣ್ಣುಗಳು ಬೇಕೆಬೇಕು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಗೆ ಬಗೆಯ ಹಣ್ಣುಗಳು ಬಂದಿದ್ದರೂ ಸಹ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿರಲಿಲ್ಲ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:
ಎಲ್ಲಲ್ಲೂ ಈಗ ದಸರಾ ಹಬ್ಬದ ಸಂಭ್ರಮ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ತಲೆತಿರುಗಿ ಬೀಳುವುದಂತೂ ಗ್ಯಾರಂಟಿ. ಹೌದು, ಕಳೆದ 15 ದಿನಗಳಿಂದ ತರಕಾರಿ, ಪೂಜೆಗೆ ಬೇಕಾದ ಹೂವು, ಹಣ್ಣುಗಳ ಬೆಲೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಹಬ್ಬವೆಂದರೆ ಸಾಮಾನ್ಯವಾಗಿ ಖರೀದಿ ಕೊಂಚ ಹೆಚ್ಚಾಗಿರುತ್ತದೆ. ಅದರಂತೆ ದಸರಾ ಹಬ್ಬದಲ್ಲಂತೂ ಅಂಗಡಿ, ಮನೆಗಳಲ್ಲಿ ಆಯುಧ ಪೂಜೆ ಸೇರಿದಂತೆ ಇತರೆ ಪೂಜಾ ವಿಧಿ-ವಿಧಾನಕ್ಕೆ ಬೇಕಾದ ವಸ್ತುಗಳ ಖರೀದಿ ಹೆಚ್ಚಾಗಿರುತ್ತದೆ. ಇದನ್ನೆ ಬಂಡವಾಳವನ್ನಾಗಿಸಿಕೊಳ್ಳುವ ಕೆಲವು ವ್ಯಾಪಾರಸ್ಥರು ಬೆಲೆ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ.
ಹೂವುಗಳ ಬೆಲೆಯೂ ಏರಿಕೆ:
ಒಂದು ಮಾರು ಮೈಸೂರು ಮಲ್ಲಿಗೆಗೆ ₹70-100, ಕಾಕಡಾ ಮಲ್ಲಿಗೆ ₹50- 70, ಅಬ್ಬಲಿ ₹80- 100, ಸೇವಂತಿ ₹40-50, ಒಂದು ಗುಲಾಬಿ ಹೂವಿಗೆ ₹10 ಹೀಗೆ ಹೂವುಗಳ ಬೆಲೆಯೂ ಏರಿಕೆಯಾಗಿದೆ.
ತರಕಾರಿ ಬೆಲೆಯೂ ಏರಿಕೆ:
ಈರುಳ್ಳಿ, ಟೊಮ್ಯಾಟೋ, ಮೆಣಸಿನಕಾಯಿ ಸೇರಿದಂತೆ ನಿತ್ಯವೂ ಬಳಕೆಯಾಗುವ ತರಕಾರಿ ಬೆಲೆಯೂ ಏರಿಕೆ ಕಂಡಿದೆ. 15 ದಿನಗಳ ಹಿಂದೆ ಕೆಜಿ ಈರುಳ್ಳಿ ₹30ರಿಂದ 50 ಇತ್ತು. ಈಗ ₹50-60ಕ್ಕೆ, ₹25-30 ಇದ್ದ ಟೊಮ್ಯಾಟೋ ₹50-60, ಹಸಿ ಮೆಣಸಿನಕಾಯಿ ₹40- 50, ₹30-40 ಇದ್ದ ಆಲೂಗಡ್ಡೆ ₹50-60 ಆಗಿದೆ. ₹40 ಇದ್ದ ಬದನೆಕಾಯಿ ₹60ಕ್ಕೆ ಬಂದಿದೆ. ₹40-50ಕ್ಕೆ ಇದ್ದ ಬೀನ್ಸ್ ಈಗ ₹120-200ರ ವರೆಗೆ, ಕ್ಯಾರೆಟ್ ₹60-70, ಎಲೆಕೋಸು ಕೆಜಿಗೆ ₹35-40, ಹೂ ಕೋಸು ₹35-40, ಸಿಹಿ ಕುಂಬಳ ₹40, ಹೀರೇಕಾಯಿ ₹50-60, ಪಡವಲಕಾಯಿ ₹40-50, ಬೀಟ್‌ರೂಟ್ ₹50-60, ಕ್ಯಾರೆಟ್ ₹70-80, ಬೆಂಡೆಕಾಯಿ ₹40-50ಕ್ಕೆ ಮಾರಾಟವಾಗುತ್ತಿದೆ.
ಹಣ್ಣಿನ ಬೆಲೆಯೂ ಏರಿಕೆ:
ದಸರಾ ಹಬ್ಬದಲ್ಲಿ ಆಯುಧ ಪೂಜೆ ಸೇರಿದಂತೆ ಇನ್ನಿತರೆ ಪೂಜಾ ಕಾರ್ಯಕ್ಕೆ ಹಣ್ಣುಗಳು ಬೇಕೆಬೇಕು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಗೆ ಬಗೆಯ ಹಣ್ಣುಗಳು ಬಂದಿದ್ದರೂ ಸಹ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿರಲಿಲ್ಲ. ಸೇಬು ಕೆಜಿಗೆ ₹130-150, ದಾಳಿಂಬೆ ₹150-160, ಚಿಕ್ಕು ₹90-100, ಪಪ್ಪಾಯ ₹60-70, ಮೋಸಂಬಿ ₹80-100, ದ್ರಾಕ್ಷಿ ₹80, ಅನಾನಸ್ ₹100-120ಕ್ಕೆ ಕೆಜಿ ಮಾರಾಟವಾಗುತ್ತಿವೆ. ಇನ್ನು ನಿಂಬೆಯ ಬೆಲೆ ಕೇಳಿದರೆ ತಲೆತಿರುಗಿ ಬೀಳುವಂತಾಗಿದೆ. ಮೊದಲು ₹10ಕ್ಕೆ 5-6 ನಿಂಬೆಹಣ್ಣು ಸಿಗುತ್ತಿದ್ದರೆ ಈಗ, ಕೇವಲ 2-3 ನಿಂಬೆಹಣ್ಣುಗಳನ್ನು ನೀಡಲಾಗುತ್ತಿದೆ.
ಮಾರ್ಕೇಟ್‌ನ್ಯಾಗ ತರಕಾರಿ, ಹಣ್ಣಿನ ಬೆಲಿ ಕೇಳಿದ್ರ ತಲಿ ತಿರುಗಿ ಬೀಳುವಂಗ್ ಆಗೈತ್ರಿ, ಹಬ್ಬಕ್ಕ ಹಣ್ಣುಹಂಪಲು, ಹೂ ಬೇಕಾಬೇಕು. ಮಾರುದ್ದ ಹೂ ತಗೊಳ್ಳಲಿಲ್ಲಾ ಅಂದ್ರೂ ಗೇಣುದ್ದ ಹೂನಾದ್ರೂ ಹಬ್ಬಕ್ಕ ತಗೊಂಡು ಹೋಗಬೇಕ್ರಿ ಎಂದು ಹನುಮವ್ವ ಮೇದಾರ ಹೇಳಿದರು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಗ್ರಾಹಕರು ಕೆಜಿ, ಎರಡು ಕೆಜಿ ತೆಗೆದುಕೊಂಡು ಹೋಗುವವರು ಬೆಲೆ ಕೇಳಿ ಕಾಲುಕೆಜಿ, ಅರ್ಧಕೆಜಿ ಖರೀದಿಸಿಕೊಂಡು ಹೋಗುತ್ತಿದ್ದಾರೆ ಎಂದು
ಚಿಕ್ಕ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ವಾಲ್ಮೀಕಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.